ಕೊಡಗು ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ : ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಟೀಕೆ

10:53 AM, Tuesday, January 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

isaq-khan

ಮಡಿಕೇರಿ : ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರ ವಿರುದ್ಧ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಜಿಲ್ಲಾ ಕಾಂಗ್ರೆಸ್ಸಿಗರು ಇತರ ಪಕ್ಷಗಳ ಬಗ್ಗೆ ಮಾತನಾಡುವ ಮೊದಲು ಕಾಂಗ್ರೆಸ್‌ನ ಈಗಿನ ಸ್ಥಿತಿ ಹೀನಾಯವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತವೆಂದು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲವೆಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಈ ದೇಶವನ್ನು 70 ವರ್ಷಗಳ ಕಾಲ ಆಳಿದೆ ಎಂದು ಹೆಮ್ಮೆ ಪಟ್ಟುಕೊಳ್ಳುವ ಜಿಲ್ಲಾ ಕಾಂಗ್ರೆಸ್ಸಿಗರು ಇಷ್ಟೊಂದು ಇತಿಹಾಸ ಹೊಂದಿರುವ ಪಕ್ಷ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎನ್ನುವುದನ್ನು ಅರಿತುಕೊಳ್ಳಲಿ.

ಬೆರಳೆಣಿಕೆಯಷ್ಟೇ ಇರುವ ಜೆಡಿಎಸ್ ಪಕ್ಷದ ಬೆಂಬಲದಿಂದ ಈ ಹಿಂದೆ ಸರ್ಕಾರ ರಚಿಸಿದ್ದು ಯಾರು ಎಂದು ಸುರೇಶ್ ಅವರು ತಿಳಿದುಕೊಳ್ಳಬೇಕು. ಕೇವಲ ಅಲ್ಪಸಂಖ್ಯಾತರ ಮತಗಳಿಗಷ್ಟೇ ಸೀಮಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಇತರ ಸಮುದಾಯದ ಮತಗಳನ್ನು ಸೆಳೆಯುವ ನಾಯಕತ್ವವೇ ಇಲ್ಲವೆಂದು ಇಸಾಕ್ ಖಾನ್ ಟೀಕಿಸಿದ್ದಾರೆ.

ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿರುವ ಜಿಲ್ಲಾ ಕಾಂಗ್ರೆಸ್ಸಿಗರು ಯಾರೋ ಆಯೋಜಿಸಿದ ಕಾರ್ಯಕ್ರಮವನ್ನು ತಮ್ಮ ನೇತೃತ್ವದ್ದು ಎಂದು ಹೇಳಿಕೊಳ್ಳುವ ಮೂಲಕ ದುರ್ಬಲ ನಾಯಕತ್ವವನ್ನು ಸಾಕ್ಷೀಕರಿಸಿದ್ದಾರೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ ಕನ್ನಡ ನಾಡಿನ ಪ್ರತಿನಿಧಿಯೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಿದ ಹೆಗ್ಗಳಿಕೆ ಇದೆ. ಆದರೆ ರಾಷ್ಟ್ರೀಯ ಪಕ್ಷವೆಂದು ಬೀಗುವ ಕಾಂಗ್ರೆಸ್ ಕರ್ನಾಟಕಕ್ಕೆ ಗೌರವವನ್ನು ತಂದು ಕೊಡುವ ಯಾವ ಕಾರ್ಯವನ್ನೂ ಮಾಡಿಲ್ಲವೆಂದು ಅವರು ಆರೋಪಿಸಿದ್ದಾರೆ.

ಕೆ.ಎಂ.ಗಣೇಶ್ ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಮರ್ಥರು ಎನ್ನುವ ಕಾರಣಕ್ಕಾಗಿ ಪಕ್ಷದ ವರಿಷ್ಠರು ಆ ಸ್ಥಾನವನ್ನು ನೀಡಿದ್ದಾರೆ. ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಗಣೇಶ್ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ.

ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಸಾಮರ್ಥ್ಯದ ಬಗ್ಗೆ ಆ ಪಕ್ಷದ ಮಂದಿಗೇ ಸಂಶಯ ಹುಟ್ಟಿದ್ದು, ವಕ್ತಾರ ಟಿ.ಈ.ಸುರೇಶ್ ಅವರು ಜಿಲ್ಲಾಧ್ಯಕ್ಷರ ಅಸ್ತಿತ್ವದ ಕುರಿತು ಚಿಂತಿಸಲಿ ಎಂದು ಇಸಾಕ್ ಖಾನ್ ತಿರುಗೇಟು ನೀಡಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English