ಮಂಗಳೂರು :ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಭಾನುವಾರ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿದ್ದ 16 ಜೋಡಿ ನಿಕಾಹ್ ಕಾರ್ಯಕ್ರಮವು ನಡೆಯಿತು. ನಿಖಾ ಕಾರ್ಯಕ್ರಮವನ್ನು ಮಂಗಳೂರು ಖಾಜಿ ತಾಕಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಖಾಜಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಿದರು. ಉಡುಪಿ ಖಾಝಿ ಪಿ.ಎಂ.ಇಬ್ರಾಹಿಂ ಮಾತನಾಡಿ ಇಸ್ಲಾಮಿನಲ್ಲಿ ವಿವಾಹ ಸರಳ, ವಿಚ್ಛೇದನ ಕಷ್ಟ. ಆದರೆ, ಜನರು ಲೌಕಿಕ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ, ಇಂದು ಅದು ಉಲ್ಟಾ ಆಗಿ, ಜೀವನ ದುಸ್ತರವಾಗುತ್ತಿದೆ. ಸಾಮೂಹಿಕ ವಿವಾಹ ಮೂಲಕ ಬಡವರ ಸೇವೆ ಮಾಡುವ ಸಂಘಟಕರ ಸೇವೆಯನ್ನು ದೇವರು ಸ್ವೀಕರಿಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾತನಾಡಿ ಬದುಕು ಕಟ್ಟಲು ವಿದೇಶಕ್ಕೆ ತೆರಳಿ ದುಡಿಯುತ್ತಿರುವವರು ಹುಟ್ಟೂರ ಬಡವರಿಗೆ ನೆರವಾಗಲು ನಾಲ್ಕು ವರ್ಷದಲ್ಲಿ 58 ಮದುವೆ ನಡೆಸಿದ್ದಾರೆ. ಇದರಲ್ಲಿ ಸ್ಥಳೀಯ ಸಮಿತಿಯ ಸಹಕಾರ ಅನನ್ಯ. ಇದನ್ನು ಮುನ್ನಡೆಸುವ ಜತೆಗೆ, ಶೌಚಾಲಯ ನಿರ್ಮಾಣ, ಬಡ ವಿದ್ಯಾರ್ಥಿಗಳ ದತ್ತು ಯೋಜನೆ ನಮ್ಮ ಮುಂದಿದೆ ಎಂದರು.
ಶಾಸಕ ಯು.ಟಿ.ಖಾದರ್, ಯುಎಇ ಎಕ್ಸ್‌ಚೇಂಜ್ ಸಿಒಒ ವೈ.ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಅಲ್ತಾಫ್ ಖತೀಬ್, ಎಸ್.ಎಂ.ಎ.ರಶೀದ್, ಎಂ.ಬಿ.ಅಬ್ದುಲ್ ರಹ್ಮಾನ್, ಮುಹಮ್ಮದ್ ಬದ್ರುದ್ದೀನ್, ಬಿ.ಎಂ.ಮುಮ್ತಾಝ್ ಅಲಿ, ಮುಹಮ್ಮದ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English