ಶಾಲೆಯಾಗಿ ಮಾರ್ಪಟ್ಟ ರೈಲ್ವೇ ಬೋಗಿಗಳು

2:44 PM, Tuesday, January 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

railu

ಮೈಸೂರು : ಸರ್ಕಾರಿ ಶಾಲೆಗಳೆಂದರೆ ಸಾಕು ಸಾಮಾನ್ಯವಾಗಿ ಅಸಡ್ಡೆ ಭಾವನೆಯಿಂದ ನೋಡುವವರೇ ಹೆಚ್ಚು. ಅದರಲ್ಲೂ ಆ ಶಾಲೆಗಳು ಶಿಥಿಲಾವಸ್ಥೆಯಲ್ಲಿದೆ, ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ, ಇಂಗ್ಲಿಷ್‌ ಮೀಡಿಯಂ ಇಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳ ಸರಮಾಲೆಯನ್ನೇ ಪೋಣಿಸುತ್ತಾರೆ. ಅಲ್ಲದೇ ಸರ್ಕಾರಿ ಶಾಲೆಯನ್ನು ತಿರಸ್ಕರಿಸಲು ಕಾರಣವನ್ನು ನಾಜೂಕಾಗಿಯೇ ಹುಡುಕುತ್ತಾರೆ. ಆದರೆ ಅಂತಹ ಶಿಥಿಲಾವಸ್ಥೆಯ ಶಾಲೆಗೆ ಮಕ್ಕಳನ್ನು ತರಲು ಅಲ್ಲಿನ ಶಿಕ್ಷಕರು ಹಗಲು ಇರಳೆನ್ನದೇ ಪರಿಶ್ರಮ ಪಡುತ್ತಾರೆ. ಅದಕ್ಕೆ ಸಾಕ್ಷಿಭೂತದಂತೆ ಶಾಲೆ ತೊರೆಯಲು ಮುಂದಾಗಿದ್ದ ಮಕ್ಕಳೇ ಮೈಸೂರಿನ ಈ ಸರ್ಕಾರಿ ಶಾಲೆಗೆ ಹುಡುಕಿಕೊಂಡು ಬರುವ ಘಟನೆಯೊಂದು ನಡೆದಿದೆ. ಇದಕ್ಕೆ ಕಾರಣ ಆ ಶಾಲೆಯ ಸೌಂದರ್ಯ.

ನಗರದ ರೈಲ್ವೆ ಇಲಾಖೆಯ ಜಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಭಿನ್ನ ಕಟ್ಟಡದ ಕಥೆಯಿದು. ಸಾಮಾನ್ಯವಾಗಿ ಸರ್ಕಾರಿ ಶಾಲೆಯನ್ನು ರೈಲ್ವೆ ಬೋಗಿಯನ್ನಾಗಿ ಪರಿವರ್ತಿಸಿ ಪಾಠ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿರುತ್ತೇವೆ. ಆದರೆ ಈ ಶಾಲೆಯಲ್ಲಿ ನಿಜವಾದ ರೈಲ್ವೆ ಬೋಗಿಯನ್ನೇ ಶಾಲೆಯನ್ನಾಗಿ ಪರಿವರ್ತಿಸಿ ಪಾಠ ಮಾಡುವ ವಿಭಿನ್ನ ಪರಿಪಾಠ ನಡೆಯುತ್ತಿದೆ. ಇದಕ್ಕೊಂದು ರೋಚಕ ಕಥೆಯೂ ಇದೆ.

ರೈಲ್ವೆ ಕಾರ್ಯಾಗಾರದ ಸುಪರ್ದಿಯಲ್ಲಿರುವ ಈ ಶಾಲೆಯು ಸ್ಥಾಪನೆಯಾಗಿದ್ದು ಮಹಾರಾಜರ ಕಾಲದಲ್ಲಿ. ಅಂದರೆ ಈ ಶಾಲೆಗೆ ಶತಮಾನಗಳ ಇತಿಹಾಸವಿದೆ. ಅದಕ್ಕೆ ತಕ್ಕಂತೆ ಈ ಶಾಲೆ ಅಷ್ಟೇ ಪುರಾತನ ಕಟ್ಟಡವೂ ಹೌದು. ಸದ್ಯ ಇದೇ ಕಟ್ಟಡ ವಿದ್ಯಾರ್ಥಿಗಳು ಪಾಠ ಕೇಳಲಾಗದ ಶಿಥಿಲಾವಸ್ಥೆಗೆ ತಲುಪಿದೆ. ಹೀಗಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿ ಪ್ರಕಟಿಸಿದರು. ಇನ್ನೇನು ಮಾಡಬೇಕೆಂದು ಅರಿಯದ ಇಲ್ಲಿನ ಶಿಕ್ಷಕರು ತಲೆ ಮೇಲೆ ಕೈ ಹೊತ್ತು ಕುಳಿತಾಗ ಎದುರಾದದ್ದೇ ರೈಲ್ವೆ ಕಾರ್ಯಾಗಾರ ತಂಡದ ಮಾಸ್ಟರ್‌ ಪ್ಲಾನ್.

ಶಾಲೆಯ ಆ ಕಟ್ಟಡವು ರೈಲ್ವೆ ಕಾರ್ಯಾಗಾರದ ಜಾಗದಲ್ಲಿದ್ದ ಕಾರಣ ಶಿಕ್ಷಕ ವೃಂದ ಶಿಕ್ಷಣ ಇಲಾಖೆ ಹಾಗೂ ರೈಲ್ವೆ ಇಲಾಖೆಗೆ ತಮ್ಮ ಕಟ್ಟದ ಅಬಿವೃದ್ಧಿಗೆ ಸಹಕರಿಸಬೇಕೆಂದು ಕೇಳಿಕೊಂಡಿತ್ತು. ಆದರೆ ಶಿಕ್ಷಣ ಇಲಾಖೆ ಈ ಜಾಗ ನಮ್ಮದಲ್ಲ, ನೀವು ರೈಲ್ವೆ ಇಲಾಖೆಗೆ ಕೇಳಿ ಎಂದರು. ರೈಲ್ವೆ ಇಲಾಖೆಗೆ ಕೇಳಿದಾಗ ಇದಕ್ಕೆ ಲಕ್ಷಗಟ್ಟಲೆ ಖರ್ಚಾಗಬಹುದೆಂದು ಅಂದಾಜಿಸಲಾಯಿತು. ಅದರೊಟ್ಟಿಗೆ ಪರ್ಯಾಯವಾಗಿ ಯಾವ ಯೋಜನೆ ರೂಪಿಸಬಹುದೆಂದು ಯೋಚಿಸುತ್ತಿದ್ದಾಗ ಹೊಳೆದದ್ದು ಈ ಪ್ಲಾನ್.

railu

ಈಗಾಗಲೇ ರೈಲ್ವೆ ಕಾರ್ಯಾಗಾರದಲ್ಲಿ ಗುಜರಿ ಹಾಕಬಹುದೆಂದು ಎತ್ತಿಟ್ಟಿದ್ದ ರೈಲ್ವೆ ಬೋಗಿಯನ್ನು ಹೊಸ ರೂಪಕ್ಕೆ ತಂದು ಅದಕ್ಕೆ ಶಾಲೆಯ ಎಲ್ಲಾ ಸಾಮಾಗ್ರಿಗಳನ್ನು ಅಳವಡಿಸಲು ಮುಂದಾಗಲಾಯಿತು. ಇದಕ್ಕಾಗಿ ಮೂರು ಕ್ರೈನ್‌ ಗಳನ್ನು ಬಳಸಿ 2 ರೈಲು ಬೋಗಿಗಳನ್ನು ಶಾಲೆಯ ಮುಂದೆ ಶಿಫ್ಟ್‌ ಮಾಡಿ ರೈಲ್ವೆ ಇಲಾಖೆ ಸಿಬ್ಬಂದಿ ವರ್ಗ, ನಂತರ ಹಳೆಯ ಬೋಗಿಗೆ ಮೊದಲು ತುಕ್ಕು ಹಿಡಿಯದಂತೆ ಗುಣಮಟ್ಟದ ಪೈಂಟ್‌ ಮಾಡಿ, ಅದಕ್ಕೆ ಅಂದದ – ಚೆಂದದ ಕನ್ನಡ ಪದಗಳ ರೂಪಕೊಟ್ಟು ಇದು ಹಳೆಯ ವಸ್ತುನಾ ಎಂದು ಹುಬ್ಬೇರಿಸುವಂತೆ ಮಾಡಲಾಯಿತು. ಅಲ್ಲದೇ ಮತ್ತೊಂದು ವಿಶೇಷವೆಂದರೇ ಬೋಗಿಯೊಳಗೆ ವಿಶೇಷ ಶಿಕ್ಷಕರ ಕೊಠಡಿಗಳು, ಶಾಲಾ ಕೊಠಡಿಯೊಳಗೆ ಇರುವಂತಹ ಎಲ್ಲಾ ವ್ಯವಸ್ಥೆಯಂತೆ ಫ್ಯಾನ್‌, ಲೈಟ್‌ ಎಲ್ಲವನ್ನು ಅಳವಡಿಸಲಾಯಿತು. ಬಯೋ ಟಾಯ್ಲೆಟ್‌ ವ್ಯವಸ್ಥೆಯನ್ನು ಸಹ ಮಾಡಲಾಯಿತು. ಇವೆಲ್ಲದಕ್ಕೂ ಹಿಡಿದಿದ್ದು ಕೇವಲ 1 ತಿಂಗಳ ಕಾಲಾವಧಿ.

2 ಬೋಗಿಗಳಲ್ಲಿ ಎರಡೆರಡು ತರಗತಿಗಳೆಂಬಂತೆ ಒಟ್ಟು ತರಗತಿಗಳನ್ನು ವಿಭಾಗಿಸಲಾಗಿದೆ. ಅಂದರೆ ಒಂದು ಬೋಗಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಕುಳಿತು ಪಾಠವನ್ನು ಸುಲಭವಾಗಿ ಕಲಿಯಬಹುದಾಗಿದೆ. ಇವೆಲ್ಲದಕ್ಕೂ ಉಚಿತ ವಿದ್ಯುತ್‌ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೆ ಇಲಾಖಾ ಅಧಿಕಾರಿಗಳಾದ ಮಾಯಗಣ್ಣ ನವರು, ಶಾಲಾ ಶಿಕ್ಷಕರು ಈ ಶಾಲೆ ಶಿಥಿಲಾವಸ್ಥೆಯಲ್ಲಿದೆ ಎಂದು ತಿಳಿಸಿದಾಗ ಈ ಯೋಜನೆ ಹೊಳೆಯಿತು. ಇದಕ್ಕೆ ನಮ್ಮ ಹಳೆಯ ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ಹೊಸ ಯೋಜನೆಯೇ ಸರಿ ಎಂದರು.

ತಮ್ಮ ರೈಲು ಬೋಗಿಯ ಶಾಲೆಯನ್ನು ಕಂಡ ವಿದ್ಯಾರ್ಥಿಗಳು ಸಂತಸಗೊಂಡಿದ್ದು, ಇನ್ನಷ್ಟು ಮಕ್ಕಳನ್ನು ಕರೆತರಬೇಕೆಂಬ ಹುರುಪಿನಲ್ಲಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀಯವರು ತಮ್ಮ ಶ್ರಮ ಫಲಿಸಿತೆಂಬ ಸಂತಸದಲ್ಲಿದ್ದಾರೆ. ಒಟ್ಟಾರೆ ಇರುವ ಸರ್ಕಾರಿ ಶಾಲೆಗಳೇ ಮಕ್ಕಳು ಬರುತ್ತಿಲ್ಲವೆಂದು ಮುಚ್ಚುತ್ತಿರುವ ಇಂದಿನ ಕಾಲಘಟದಲ್ಲಿ, ಬೀಳಬಹುದಾದ ಕಟ್ಟಡಕ್ಕೆ ಪರ್ಯಾಯವಾಗಿ ವಿಭಿನ್ನವಾಗಿ ಯೋಚಿಸಿ ರೂಪಿಸಿ ಈ ತೆರನಾದ ನೂತನ ಕಾರ್ಯಕ್ಕೆ ನಾಂದಿ ಹಾಡಿದ ರೈಲ್ವೆ ಇಲಾಖೆ ತಂಡದ ಪರಿಶ್ರಮಕ್ಕೆ ನಿಜಕ್ಕೂ ಹ್ಯಾಟ್ಸ್ ಅಪ್ ಹೇಳಲೇಬೇಕು.

ಕೋವರ್ ಕೊಲ್ಲಿ ಇಂದ್ರೇಶ್

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English