ಮೈಸೂರು : ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಲು ಇಚ್ಚಿಸುತ್ತಾರೆ. ಏಕೆಂದರೆ ಅಪಘಾತವಾದಾಗ ನಷ್ಟ ಸಂಭವಿಸದಿರಲಿ ಎಂಬ ಕಾರಣಕ್ಕಾಗಿ .ಅಲ್ಲದೆ ಕಾನೂನಿನ ಪ್ರಕಾರ ಇದು ಕಡ್ಡಾಯವೂ ಕೂಡ. ಆದರೆ ಇಲ್ಲೊಬ್ಬ ಐನಾತಿಯು ವಾಹನಗಳಿಗೆ ಮಾಲೀಕರು ನೀಡಿದ ವಿಮೆ ಹಣವನ್ನು ಲಪಟಾಯಿಸಲು ನಕಲಿ ವಿಮೆ ರಸೀತಿ ನೀಡುತಿದ್ದುದು ಬಯಲಾಗಿದ್ದು ಇವನನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹುಣಸೂರು ತಾಲೂಕಿನ ಯಾಶೋಧರಪುರದ ಶಿವರಾಜ್ ಎಂಬುವರು ತಮ್ಮ ಸ್ವಿಫ್ಟ್ ಕಾರಿಗೆ ಆರೋಪಿ ಮಹಮದ್ ವಿಕಾರ್ ನ ಇನ್ಷೂರೆನ್ಸ್ ಜೋನ್ ಅಂಗಡಿಯಲ್ಲಿ 15 ಸಾವಿರ ರೂಪಾಯಿ ನೀಡಿ ವಿಮೆ ಮಾಡಿಸಿದ್ದರು. ಆರೋಪಿ ಇನ್ಷೂರೆನ್ಸ್ ಬಾಂಡ್ ಕೂಡ ನೀಡಿದ್ದ. ಆದರೆ ಕಾರು ಇತ್ತೀಚೆಗೆ ಅಪಘಾತವಾಗಿತ್ತು, ಈ ಸಂದರ್ಭದಲ್ಲಿ ಶಿವರಾಜ್ ತಮ್ಮ ಇನ್ಸೂರೆನ್ಸ್ ಸೌಲಭ್ಯ ಪಡೆಯಲು ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಹೋಗಿದ್ದರು. ಈ ವೇಳೆ ವಿಮೆ ನಕಲಿ ಎಂಬುದು ಗೊತ್ತಾಗಿದೆ.ಕೂಡಲೇ ವಿಮಾ ಕಂಪನಿಯ ಸೀನಿಯರ್ ಮ್ಯಾನೇಜರ್ ಸುಮಂಗಲಾ ಅವರು ಹುಣಸೂರು ಪೋಲೀಸರಿಗೆ ದೂರು ನೀಡಿದ್ದರು.
ಕೂಡಲೇ ಕಾರ್ಯ ಪ್ರವೃತ್ತರಾದ ಪೋಲೀಸರು ಇನ್ಷೂರೆನ್ಸ್ ಜೋನ್ ಅಂಗಡಿಯ ಮೇಲೆ ಧಾಳಿ ನಡೆಸಿದರು. ಆಗ ಆರೋಪಿ ಕಂಪ್ಯೂಟರ್ ಬಳಸಿಕೊಂಡು ನೂರಾರು ವಾಹನಗಳ ಮಾಲೀಕರಿಗೆ ನೀಡಿದ್ದ ನಕಲಿ ರಸೀತಿಗಳು ಪತ್ತೆಯಾದವು. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈತನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಕುರಿತು ಮಾತನಾಡಿದ ಪೋಲೀಸ್ ಇನ್ಸ್‌ಪೆಕ್ಟರ್ ಪೂವಯ್ಯ ಅವರು ವಾಹನಗಳ ಮಾಲೀಕರು ತಾವು ಪಡೆದುಕೊಂಡಿರುವ ಇನ್ಷೂರೆನ್ಸ್ ಬಾಂಡ್ ನ ಮೇಲಿರುವ ಕ್ಯೂ ಆರ್ ಕೋಡ್ ನ್ನು ಮೊಬೈಲ್ ಆಪ್ ಮೂಲಕ ಸ್ಕ್ಯಾನ್ ಮಾಡಿದಾಗ ಅಸಲಿಯೋ ನಕಲಿಯೋ ಗೊತ್ತಾಗಿಬಿಡುತ್ತದೆ. ಮಾಲೀಕರು ಈ ಕುರಿತು ಹೆಚ್ಚು ಗಮನ ಹರಿಸಬೇಕು ಎಂದರು. ಅಲ್ಲದೆ ಡಿಜಿ ಲಾಕರ್ ಮೂಲವೂ ಬಾಂಡ್ ನ ಸಾಚಾತನ ಪರಿಶೀಲಿಸಬಹುದು ಎಂದರು.
ಕೋವರ್ ಕೊಲ್ಲಿ ಇಂದ್ರೇಶ್
Click this button or press Ctrl+G to toggle between Kannada and English