ಮಡಿಕೇರಿ : ಪೊನ್ನೋಲತಂಡ ಕುಟುಂಬದ ಆಶ್ರಯದಲ್ಲಿ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಕಕ್ಕಬೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಹಬ್ಬ-2020 ರ ಲಾಂಛನವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅನಾವರಣಗೊಳಿಸಿದರು.
ನಗರದ ಪತ್ರಿಕಾ ಭನದಲ್ಲಿ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನದ ಅಗತ್ಯವಿದೆ ಎಂದರು. ಕೊಡವ ಕುಟುಂಬಗಳು ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದವು. ಇದೀಗ ಪೊನ್ನೋಲತಂಡ ಕುಟುಂಬಸ್ಥರು ಇದೇ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ರೀತಿಯ ವಿಭಿನ್ನ ಪ್ರಯತ್ನ ಸ್ವಾಗತಾರ್ಹವೆಂದರು.
ಇದೊಂದು ಗ್ರಾಮೀಣ ಕ್ರೀಡೆಯಾಗಿದ್ದು, ಕುಟುಂಬಸ್ಥರ ಮೂರು ವರ್ಷಗಳ ಶ್ರಮದಿಂದ ಈ ಕ್ರೀಡೆಯನ್ನು ಏರ್ಪಡಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೂ ಸ್ಪರ್ಧಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳ ಜೊತೆಗೆ ಗ್ರಾಮೀಣ ಕ್ರೀಡೆಗಳ ಬೆಳವಣಿಗೆಗೂ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯವೆಂದು ಪಾರ್ವತಿ ಅಪ್ಪಯ್ಯ ಹೇಳಿದರು. ಕ್ರೀಡಾಕೂಟದಲ್ಲಿ ಕೊಡವ ಕುಟುಂಬದ ಪ್ರತಿಯೊಬ್ಬರು ಭಾಗವಹಿಸುವಂತೆ ಮನವಿ ಮಾಡಿದರು.
ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಹಬ್ಬದ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 22 ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿ ಹಬ್ಬವನ್ನು ವರ್ಷಕ್ಕೆ ಒಂದೊಂದು ಕೊಡವ ಕುಟುಂಬಗಳು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿವೆ. ಇದೀಗ ಪೊನ್ನೋಲತಂಡ ಕುಟುಂಬಸ್ಥರು ಸುಮಾರು ಮೂರು ವರ್ಷಗಳ ನಿರಂತರ ಚಿಂತನೆಯಿಂದ ಗ್ರಾಮೀಣ ಕ್ರೀಡೆಯಾದ ಹಗ್ಗಜಗ್ಗಾಟ ಸ್ಪರ್ಧೆಯನ್ನು ನಡೆಸಲು ನಿರ್ಧರಿಸಿದ್ದಾರೆ ಎಂದರು.
ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಕಕ್ಕಬ್ಬೆಯ ಪ್ರೌಢ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ ಉತ್ತಮ ನಗದು ಮತ್ತು ಆಕರ್ಷಕ ಟ್ರೋಪಿಯನ್ನು ನೀಡಲಾಗುವುದು. ಪಂದ್ಯಾವಳಿಯಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಾರಂಭದ ದಿನ ಮತ್ತು ಕೊನೆಯ ದಿನ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಪೊನ್ನೋಲತಂಡ ಕುಟುಂಬದ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕಿರಣ್ ಪೊನ್ನಪ್ಪ ಮಾಹಿತಿ ನೀಡಿದರು.
ಪೊನ್ನೋಲತಂಡ ಕುಟುಂಬಸ್ಥರ ಅಧ್ಯಕ್ಷ ಅಶೋಕ್ ನಂಜಪ್ಪ ಮಾತನಾಡಿ, ಹೊರ ಜಿಲ್ಲೆ ಮತ್ತು ಹೊರ ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ಕೊಡವ ಕುಟುಂಬಸ್ಥರು ಹಗ್ಗಜಗ್ಗಾಟ ಹಬ್ಬದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕುಟುಂಬದ ಕಾರ್ಯದರ್ಶಿ ಅಣ್ಣಿ ಬಿದ್ದಯ್ಯ, ಹಬ್ಬದ ಕಾರ್ಯದರ್ಶಿ ಪೊನ್ನೋಲತಂಡ ಶಿವಾಜಿ ಮುದ್ದಪ್ಪ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English