ನವದೆಹಲಿ : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಮತ್ತೆ ವಿಳಂಬವಾಗುತ್ತಿರುವ ಬಗ್ಗೆ ಸಂತ್ರಸ್ತೆಯ ತಾಯಿ ಆಶಾ ದೇವಿ ಕಣ್ಣೀರಿಟ್ಟಿದ್ದಾರೆ. ಸರ್ಕಾರ ಸಂತ್ರಸ್ತ ಕುಟುಂಬಕ್ಕಲ್ಲ, ಆರೋಪಿಗಳಿಗೆ ಸಹಾಯ ಮಾಡುತ್ತಿದೆ ಎನ್ನುವ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಜನವರಿ 22ರಂದು ತಿಹಾರ್ ಜೈಲಿನಲ್ಲಿ ನಾಲ್ವರು ದೋಷಿಗಳನ್ನು ನೇಣಿಗೆ ಹಾಕಬೇಕಿತ್ತು. ಆದರೆ, ಅಪರಾಧಿಗಳ ಕ್ಷಮಾದಾನ ಅರ್ಜಿ ಇತ್ಯರ್ಥವಾಗಿಲ್ಲದ ಕಾರಣ ಗಲ್ಲುಶಿಕ್ಷೆ ಮುಂದೂಡಬೇಕು ಹಾಗೂ ಮತ್ತೊಂದು ಡೆತ್ ವಾರೆಂಟ್ ನೀಡಬೇಕೆಂದು ಹೈಕೋರ್ಟ್ಗೆ ತಿಹಾರ್ ಜೈಲಿನ ಅಧಿಕಾರಿಗಳು ಮನವಿ ಮಾಡಿದ್ದರು. ಈ ವಿಚಾರದಲ್ಲಿ ನಿರ್ಭಯಾ ತಾಯಿ ಕಣ್ಣೀರಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಶಾ ದೇವಿ, “ಸರ್ಕಾರ ಹಾಗೂ ಕೋರ್ಟ್ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಸಂತ್ರಸ್ತರ ಕುಟುಂಬಕ್ಕಲ್ಲ, ಅಪರಾಧಿಗಳಿಗೆ ಸಹಾಯ ಮಾಡುತ್ತಿದೆ ಎಂದೆನಿಸುತ್ತಿದೆ. ನಾವು ನಿತ್ಯ ಕೋರ್ಟ್ಗೆ ಅಲೆದಾಡಬೇಕು. ಸರ್ಕಾರ ನಮಗೆ ಶಿಕ್ಷೆ ನೀಡುತ್ತಿದೆ ಎನ್ನುವ ಭಾವನೆ ಕಾಡುತ್ತಿದೆ,” ಎಂದರು.
2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಆಕೆಯ ಜೊತೆಗಿದ್ದ ಸ್ನೇಹಿತನನ್ನ ಕೈಕಾಲು ಕಟ್ಟಿ ಪ್ರಜ್ಞೆ ತಪ್ಪುವಂತೆ ಥಳಿಸಲಾಗಿತ್ತು. ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೆ ದೈಹಿಕ ಹಲ್ಲೆ ಮಾಡಲಾಗಿತ್ತು. ಮರ್ಮಾಂಗಗಳನ್ನು ಘಾಸಿಗೊಳಿಸಲಾಗಿತ್ತು. ತೀರಾ ಗಂಭೀರವಾಗಿ ಗಾಯಗೊಂಡಿದ್ದ ನಿರ್ಭಯಾ ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ನಿಧನರಾದರು. ಪ್ರಕರಣಕ್ಕೆ ಸಂಬಂಧಿಸಿ ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪ್ರಾಪ್ತ ಹುಡುಗನನ್ನು ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ. ಉಳಿದವರಿಗೆ ನೇಣು ಶಿಕ್ಷೆ ಘೋಷಣೆ ಆಗಿದೆ.
Click this button or press Ctrl+G to toggle between Kannada and English