ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಇಬ್ಬರು ಉಗ್ರರ ಜೊತೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ದೇವಿಂದರ್ ಸಿಂಗ್ ರಾಷ್ಟ್ರೀಯ ತನಿಖಾ ತಂಡ ಅಧಿಕಾರಿಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ. ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ನಿಂತಿರುವ ಉಗ್ರರಿಗೆ ನೆರವು ನೀಡುವ ಪೊಲೀಸರಿಗೆ ಲಕ್ಷ ಲಕ್ಷ ರೂಪಾಯಿ ಹಣ ನೀಡಲಾಗುತ್ತದೆ ಎಂದು ವಿಚಾರಣೆ ವೇಳೆ ಡಿಎಸ್ಪಿ ದೇವಿಂದರ್ ಸಿಂಗ್ ಬಾಯಿ ಬಿಟ್ಟಿದ್ದಾನೆ. ಅಲ್ಲದೆ, ಇಬ್ಬರು ಉಗ್ರರರನ್ನು ಸುರಕ್ಷಿತವಾಗಿ ಬೇರೊಂದು ಕಡೆಗೆ ತಲುಪಿಸಲು ತಾನೂ ಸಹ ಲಕ್ಷ ಲಕ್ಷ ರೂಪಾಯಿ ಲಂಚ ಪಡೆದಿರುವುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಜಮ್ಮು-ಕಾಶ್ಮೀರದಲ್ಲಿ ಇರುವ ಉಗ್ರಗಳಿಗೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ದೇವಿಂದರ್ ಸಿಂಗ್ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಹಣದ ಆಸೆಗೆ ಬಿದ್ದು ಪೊಲೀಸರೇ ಉಗ್ರರನ್ನು ರಕ್ಷಿಸುವುದರ ಜೊತೆಗೆ ಅವರಿಗೆ ಊಟ-ವಸತಿಯ ವ್ಯವಸ್ಥೆಯನ್ನೂ ಮಾಡಿಕೊಡುತ್ತಾರೆ ಎಂದು ಬಂಧಿತ ಡಿಎಸ್ ಪಿ ದೇವಿಂದರ್ ಸಿಂಗ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳ ಎದುರು ಬಂಧಿತ ಡಿಎಸ್ ಪಿ ಮತ್ತೊಂದು ಸ್ಪೋಟಕ ವಿಚಾರವನ್ನು ತಿಳಿಸಿದ್ದಾನೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ನವೀದ್ ಬಾಬು ಅಲಿಯಾಸ್ ಬಾಬರ್ ಅಜಮ್ ಹಾಗೂ ಮತ್ತೊಬ್ಬ ಉಗ್ರ ಆಸಿಫ್ ಅಹ್ಮದ್ ನನ್ನು ರಕ್ಷಿಸಲು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಾನು ಅವರ ಜೊತೆಗೆ ತೆರಳಿದೆ ಎಂದು ವಿಚಾರಣೆ ವೇಳೆ ದೇವಿಂದರ್ ಸಿಂಗ್ ತಿಳಿಸಿದ್ದಾನೆ. ಆದರೆ, ಆ ಹಿರಿಯ ಅಧಿಕಾರಿ ಯಾರು ಎಂಬುದನ್ನು ಗೌಪ್ಯವಾಗಿ ಇರಿಸಲಾಗಿದೆ. ಈ ಹೇಳಿಕೆಯನ್ನೇ ಆಧಾರವಾಗಿ ಇಟ್ಟುಕೊಂಡು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಅಂದು ತಾನು ಮಾಡುತ್ತಿದ್ದ ತಪ್ಪಿನ ಬಗ್ಗೆ ತನಗೆ ಅರಿವೇ ಆಗಲಿಲ್ಲ (“I Must Have Lost My Mind To Do What I Did”) ಎಂದು ತನಿಖಾಧಿಕಾರಿಗಳ ಎದುರು ದೇವಿಂದರ್ ಸಿಂಗ್ ಪಶ್ಚಾತಾಪದ ಮಾತುಗಳನ್ನು ಆಡಿದ್ದಾನೆ ಎನ್ನಲಾಗಿದೆ. ಅಲ್ಲದೇ, ಕರ್ತವ್ಯವನ್ನು ಮರೆತು ನಡೆದುಕೊಂಡ ತನ್ನಿಂದ ದೊಡ್ಡ ಅಪರಾಧವಾಗಿದೆ ಎಂದು ದೇವಿಂದರ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲಿಕ್ಕಾಗಿ ಬಂಧಿತ ಡಿಎಸ್ ಪಿ ದೇವಿಂದರ್ ಸಿಂಗ್ 10 ಲಕ್ಷಕ್ಕೂ ಅಧಿಕ ಹಣವನ್ನು ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಹಿಜ್ಬುಲ್ ಉಗ್ರ ನವೀದ್ ಬಾಬು ಈ ಮೊದಲೇ 8 ಲಕ್ಷ ರೂಪಾಯಿ ಹಣವನ್ನು ನೀಡಿದ್ದನು. ಈ ಉಗ್ರನನ್ನು ಇದೇ ಡಿಎಸ್ ಪಿ ದೇವಿಂದರ್ ಸಿಂಗ್ ಮೊದಲೊಮ್ಮೆ ಜಮ್ಮು-ಕಾಶ್ಮೀರದ ಶೋಪಿಯಾನ್ ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದನು. ಅಲ್ಲದೇ ಉಗ್ರನಿಗೆ ಅಲ್ಲಿ, ಊಟ-ವಸತಿಯ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದನು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಜಮ್ಮು-ಕಾಶ್ಮೀರದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಯಾವಾಗಲೂ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುತ್ತೇವೆ ಎಂದು ಉಗ್ರ ನವೀದ್ ಬಾಬು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಉಗ್ರ ನವೀದ್ ಬಾಬು, ದಕ್ಷಿಣ ಕಾಶ್ಮೀರ ಶೋಪಿಯಾನ್ ಜಿಲ್ಲೆಯ ನಜನೀನ್ ಪೂರಾ ಮೂಲದನಾಗಿದ್ದಾನೆ. ನಜನೀನ್ ಪೂರಾ ಒಂದು ಗುಡ್ಡಗಾಡು ಪ್ರದೇಶವಾಗಿದ್ದು, ತೀವ್ರ ಚಳಿಯಿಂದ ಪಾರಾಗಲು ಬೇರೆ ಕಡೆಗೆ ಹೊರಟಿದ್ದೆವು ಎಂದು ಒಪ್ಪಿಕೊಂಡಿದ್ದಾನೆ.
1990ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದ ದೇವಿಂದರ್ ಸಿಂಗ್, ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. 1992ರಲ್ಲಿ ದಕ್ಷಿಣ ಕಾಶ್ಮೀರದ ಬಿಜ್ ಬಿಹಾರ್ ಪ್ರದೇಶದಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಟ್ರಕ್ ವಶಕ್ಕೆ ಪಡೆಯಲಾಗಿತ್ತು. ಹೀಗೆ ವಶಕ್ಕೆ ಪಡೆದ ಮಾದಕವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಹಿನ್ನೆಲೆ ದೇವಿಂದರ್ ಸಿಂಗ್ ನ್ನು ಅಮಾನತುಗೊಳಿಸಲಾಗಿತ್ತು. 1998ರಲ್ಲಿ ಶ್ರೀನಗರದ ವಿಶೇಷ ಕಾರ್ಯಾಚರಣೆ ಪಡೆ (SOG)ಗೆ ವರ್ಗಾಯಿಸಲಾಯಿತು. ಬುದ್ಗಾಮ್ ನಲ್ಲಿ ಎಸ್ಓಜಿ ಶಿಬರದಲ್ಲಿ ಕಾರ್ಯಾಚರಣೆಗೆ ತೆರಳಿದ್ದ ವೇಳೆಯಲ್ಲೂ ದೇವಿಂದರ್ ಸಿಂಗ್ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸಿದ್ದರು.
ಪೊಲೀಸ್ ಆಗಿದ್ದುಕೊಂಡು ಹಣಕ್ಕಾಗಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಡಿಎಸ್ ಪಿ ದೇವಿಂದರ್ ಸಿಂಗ್ ಲಕ್ಷ ಲಕ್ಷ ರೂಪಾಯಿಯನ್ನು ಅಕ್ರಮವಾಗಿ ಗಳಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಡಿಎಸ್ ಪಿ ದೇವಿಂದರ್ ಸಿಂಗ್ ರ ಬ್ಯಾಂಕ್ ವಿವರ, ಆಸ್ತಿ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲಿಗೆ ಈ ಬಗ್ಗೆ ಪರಿಶೀಲನೆ ನಡೆಸಿದ್ದ ಪೊಲೀಸರು, ಇದೀಗ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಹಸ್ತಾಂತರಗೊಳಿಸಿದ್ದಾರೆ.
ಕಳೆದ ಜನವರಿ.11ರ ಶನಿವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಹೊರಭಾಗಕ್ಕೆ ತೆರಳುತ್ತಿದ್ದರು. ಉಗ್ರ ನವೀದ್ ಬಾಬು ಹಾಗೂ ಆಸಿಫ್ ಅಹ್ಮದ್ ತೆರಳುತ್ತಿದ್ದ ಕಾರಿನಲ್ಲೇ ಡಿಎಸ್ ಪಿ ದೇವಿಂದರ್ ಸಿಂಗ್ ಕೂಡಾ ತೆರಳುತ್ತಿದ್ದರು. ಈ ವೇಳೆ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಉಗ್ರರು ಎರಡು ಎಕೆ ರೈಫಲ್ ಸೇರಿಂದತೆ ಮಾರಕಾಸ್ತ್ರಗಳ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇದೇ ವೇಳೆ ಡಿಎಸ್ ಪಿ ದೇವಿಂದರ್ ಸಿಂಗ್ ನ್ನು ಕೂಡಾ ಬಂಧಿಸಲಾಗಿತ್ತು.
Click this button or press Ctrl+G to toggle between Kannada and English