ಮಡಿಕೇರಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರುದ್ಧ ಯಾರೇ ಎಷ್ಟೇ ಚೀರಾಡಿದರೂ, ಯಾವುದೇ ಹೋರಾಟಗಳನ್ನು ನಡೆಸಿದರೂ ಕಾಯ್ದೆ ಅನುಷ್ಠಾನಗೊಳ್ಳುವುದು ಮಾತ್ರ ಖಚಿತವೆಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ರಹೀಂ ಉಚ್ಚಿಲ ಸ್ಪಷ್ಟ ಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಪೌರತ್ವ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಕಲಿ ಜಾತ್ಯತೀತವಾದಿಗಳು ವಿನಾಕಾರಣ ಕಾಯ್ದೆ ಕುರಿತು ಮುಸಲ್ಮಾನರಲ್ಲಿ ಭಯ ಮೂಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾರತ ದೇಶದ ಮುಸಲ್ಮಾನರಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲವೆಂದು ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಅಭಯ ನೀಡಿದ್ದರೂ ಪ್ರತಿಭಟನೆಗಳು ಯಾಕೆ ನಡೆಯುತ್ತಿವೆ ಎನ್ನುವ ಬಗ್ಗೆ ಪ್ರಜ್ಞಾವಂತರು ಚಿಂತಿಸಬೇಕಾಗಿದೆ. ನನ್ನ ಬಳಿ ಬಂದ ಎಲ್ಲಾ ಮುಸಲ್ಮಾನರಿಗೂ ಕಾಯ್ದೆ ಕುರಿತು ಮನವರಿಕೆ ಮಾಡಿದ್ದು, ತೊಂದರೆಯಾಗುವುದಿಲ್ಲವೆಂದು ಮನವೊಲಿಸುವ ಪ್ರಯತ್ನ ಮಾಡಿದ್ದೇನೆ. ನನಗೆ ನನ್ನ ಸಮುದಾಯ ಮತ್ತು ನನ್ನ ಧರ್ಮ ಮುಖ್ಯ, ಹಾಗೊಂದು ವೇಳೆ ಕಾಯ್ದೆಯಿಂದ ತೊಂದರೆಯಾಗುವುದೇ ಆದಲ್ಲಿ ನಾನು ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದೇನೆ. ಆದರೆ ಖುದ್ದು ದೇಶದ ಜವಬ್ದಾರಿಯುತ ಪ್ರಧಾನಿ ಪಟ್ಟದಲ್ಲಿರುವವರೇ ಭರವಸೆ ನೀಡಿದರೂ ಹೋರಾಟಗಳು ಮುಂದುವರೆದಿರುವುದು ಬೇಸರದ ವಿಚಾರವೆಂದರು.
ತ್ರಿವಳಿ ತಲಾಖ್ ಹಾಗೂ ರಾಮಮಂದಿರ ತೀರ್ಪಿನ ಸಂದರ್ಭ ಒಗ್ಗಟ್ಟಿನಿಂದ ದೇಶದ ಜನ ಸ್ವಾಗತಿಸಿದನ್ನು ಸಹಿಸದ ಅತೃಪ್ತ ಆತ್ಮಗಳು ಇದೀಗ ಪೌರತ್ವ ಕಾಯ್ದೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಗೊಂದಲ ಸೃಷ್ಟಿಸಿ, ಅಶಾಂತಿ ಮೂಡಿಸುತ್ತಿವೆ ಎಂದು ಆರೋಪಿಸಿದರು.
ಬಂದವರೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಲೇ ಇದ್ದ ಪರಿಣಾಮ ಇಂದು ದೇಶ ಹಾಳಾಗಿದೆ, ಭಾರತವನ್ನು ಉಳಿಸಿಕೊಳ್ಳುವ ಮಹತ್ತರ ಜವಬ್ದಾರಿ ಎಲ್ಲರ ಮೇಲೂ ಇದ್ದು, ಪೌರತ್ವ ಕಾಯ್ದೆ ಇದಕ್ಕೆ ಸಹಕಾರಿಯಾಗಿದೆ. ಬಾಂಬ್ ಸ್ಫೋಟಿಸಲು ಬರುವವರಿಗೆ ಇಲ್ಲಿರಲು ಯಾಕೆ ಅವಕಾಶ ನೀಡಬೇಕೆಂದು ಪ್ರಶ್ನಿಸಿದ ರಹೀಂ ಉಚ್ಚಿಲ, ಇಂದು ಕಾಯ್ದೆಯನ್ನು ವಿರೋಧಿಸುತ್ತಿರುವವರು ಮುಂದೊಂದು ದಿನ ಅದರ ಮಹತ್ವವನ್ನು ಅರಿತು ತಲೆ ತಗ್ಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಂ ರಾಷ್ಟ್ರಗಳಲ್ಲಿ ನೆಲೆ ನಿಂತಿರುವ ಭಾರತೀಯರಿಗೆ ಆ ದೇಶಗಳ ಪೌರತ್ವ ದೊರೆತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಕೊಡಗಿನಲ್ಲಿ ಹುಟ್ಟಿ ಬೆಳೆದ ಮುಸಲ್ಮಾನರು ಭಾರತೀಯರೇ ಆಗಿದ್ದಾರೆ, ಪೌರತ್ವ ಕಾಯ್ದೆಯಿಂದ ಇವರನ್ನು ಹೊರ ಹಾಕಲು ಸಾಧ್ಯವಿಲ್ಲ. ಆದರೆ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ಸೇರಿಕೊಂಡಿರುವ ಬಾಂಗ್ಲಾ ದೇಶಿಗರು ಮಾತ್ರ ಹೊರ ಹೋಗಲಿದ್ದಾರೆ ಎಂದು ಸ್ಪಷ್ಟಪಡಿಸಿದ ರಹೀಂ ಉಚ್ಚಿಲ, ಕಾಯ್ದೆಯನ್ನು ವಿರೋಧಿಸುವವರಿಗೆ ಪರಕೀಯರ ಬಗ್ಗೆ ವ್ಯಾಮೋಹ ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English