ಮಡಿಕೇರಿ : ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ ಶೇ.1 ರಷ್ಟಿರುವ ಸುಶಿಕ್ಷಿತ ಅನಾಗರೀಕರು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದ್ದು, ಶೇ.99 ರಷ್ಟು ಮಂದಿ ಕಾಯ್ದೆಯ ಪರವಾಗಿದ್ದಾರೆ ಎಂದರು. ಭಾರತದ ಪಕ್ಕದ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಆರು ಧರ್ಮದವರಿಗೆ ದೇಶದಲ್ಲಿರಲು ಅವಕಾಶ ಕಲ್ಪಿಸುವುದಕ್ಕಾಗಿ ಪೌರತ್ವವನ್ನು ನೀಡುವ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಲ್ಲಿರುವ ಮುಸಲ್ಮಾನರ ಮೇಲೆ ಧಾರ್ಮಿಕ ಶೋಷಣೆ ನಡೆಯುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.
ಪಾಕಿಸ್ತಾನದ 283, ಅಪಘಾನಿಸ್ತಾನದ 912 ಹಾಗೂ 170 ಮಂದಿ ಬಾಂಗ್ಲಾದೇಶಿಗರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ರವಿಕುಮಾರ್, ಭಾರತೀಯ ಕಾಂಗ್ರೆಸ್ ಇಂದು ಪಾಕಿಸ್ತಾನ ಕಾಂಗ್ರೆಸ್ ಆಗಿ ಪರಿವರ್ತನೆಗೊಂಡಿದೆ. ಪಾಕ್ ಪರ ಮಾತನಾಡಲು ಆರಂಭಿಸಿದ ನಂತರ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೌದೋ ಹುಲಿಯಾ ಅಲ್ಲ, ಹೌದೋ ಸೋನಿಯಾ ಆಗಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರುಗಳು ನೈಜ ಹುಲಿಯಾಗಳು ಎಂದು ಹೇಳಿದರು.
ದೇಶದ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷದ ಗುಲಾಮಗಿರಿಯಿಂದ ಮುಸಲ್ಮಾನರು ಹೊರ ಬರಬೇಕಾಗಿದೆ. ಕಾಂಗ್ರೆಸ್ ಮತಬ್ಯಾಂಕ್ ಆಗದಿರಿ, ಶಿಕ್ಷಣವಂತರಾಗಿರುವ ನೀವು ಕಾಂಗ್ರೆಸ್ ಮಾತು ಕೇಳಿ ಹಾಳಾಗದೆ ನಿಮ್ಮದೇ ಬುದ್ದಿವಂತಿಕೆಯನ್ನು ಉಪಯೋಗಿಸಿ ಪೌರತ್ವ ಕಾಯ್ದೆಯನ್ನು ಅರಿತುಕೊಳ್ಳಿ. ಬೀದಿಗಿಳಿದು ಹೋರಾಟ ನಡೆಸದೆ ಸ್ವತಂತ್ರ ನಿರ್ಧಾರ ಕೈಗೊಳ್ಳಿ ಎಂದು ಕಿವಿಮಾತು ಹೇಳಿದರು. ಮಡಿಕೇರಿಯ ಶ್ರೀಓಂಕಾರೇಶ್ವರನ ಆಣೆಗೂ ಮುಸಲ್ಮಾನರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲವೆಂದ ರವಿಕುಮಾರ್, ಇದೊಂದು ಮಾನವೀಯ ಕಾನೂನು ಎಂದು ಸಮರ್ಥಿಸಿಕೊಂಡರು.
Click this button or press Ctrl+G to toggle between Kannada and English