ಕಾಯ್ದೆ ತಿದ್ದುಪಡಿಗೆ ಸಂವಿಧಾನದಲ್ಲಿ ಅವಕಾಶವಿದೆ

10:35 AM, Saturday, January 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

meeting

ಮಡಿಕೇರಿ : ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಎಂದು ಕೆಲವರು ಟೀಕಿಸುತ್ತಿದ್ದು, ಕಾಯ್ದೆ ತಿದ್ದುಪಡಿಗೆ ಸಂವಿಧಾನದಲ್ಲೆ ಅವಕಾಶವಿದೆ ಎಂದರು. ನೆಹರು ಅವರ ಕಾಲದಲ್ಲಿ ಪ್ರಸ್ತಾಪವಾದ ಈ ಕಾಯ್ದೆಯನ್ನು ನಂತರದ ಕಾಂಗ್ರೆಸ್ ಸರ್ಕಾರ ಅನೇಕ ಬಾರಿ ತಿದ್ದುಪಡಿ ಮಾಡಿದೆ. ಸಂವಿಧಾನದ ಅಡಿಯಲ್ಲೆ ರಚನೆಯಾದ ಕಾಯ್ದೆ ಇದಾಗಿದ್ದು, ಲೋಕಸಭೆಯಲ್ಲಿ ವಿಸ್ತೃತ ಚರ್ಚೆಯಾದ ನಂತರವೆ ಕಾಯ್ದೆಯನ್ನು ಜಾರಿಗೆ ತರಲಾಗಿದೆಯೇ ಹೊರತು, ಏಕಾಏಕಿ ಜಾರಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಸದನದಲ್ಲಿ ಪ್ರಸ್ತಾಪವಾದಾಗಲೆ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದಿತ್ತು. ಆದರೆ, ಇದೀಗ ಕ್ಷುಲ್ಲಕ ರಾಜಕಾರಣಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

meeting

ಬಂದವರನ್ನೆಲ್ಲ ದೇಶದೊಳಗೆ ಸೇರಿಸಿಕೊಳ್ಳಲು, ಭಾರತವೇನು ಧರ್ಮಛತ್ರವೇ ಎಂದು ಪ್ರಶ್ನಿಸಿದ ಕೆ.ಜಿ.ಬೋಪಯ್ಯ, ಇಸ್ಲಾಂ ದೇಶಗಳಲ್ಲಿರುವ ಕಠಿಣ ಕಾನೂನುಗಳ ಬಗ್ಗೆ ವಿಶ್ಲೇಷಿಸಿದರು. ಬಾಂಗ್ಲಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಮುಸ್ಲಿಮರಿಗೆ ಕಿರುಕುಳ ಆಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಅಖಂಡ ಭಾರತದ ಸಂಕಲ್ಪದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಕಾರ ನೀಡಬೇಕೆಂದರು.

ಕಾಂಗ್ರೆಸ್, ಸಿಪಿಐಎಂ ಸೇರಿದಂತೆ ಕೆಲವು ಪಕ್ಷಗಳು ಮತ್ತು ಸಂಘಟನೆಗಳು ಜನರ ಹಾದಿ ತಪ್ಪಿಸುತ್ತಿವೆ ಎಂದು ಅವರು ಟೀಕಿಸಿದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರುಗಳು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಲು ಷಾ ಅವರಿಗೆ ಎದೆಗಾರಿಕೆ ಇದ್ದುದರಿಂದ ಸಾಧ್ಯವಾಯಿತೆಂದು ಬೋಪಯ್ಯ ಅಭಿಪ್ರಾಯಪಟ್ಟರು.

ಪೌರತ್ವ ಕಾಯ್ದೆ ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ಜಾರಿಯಾಗಿಲ್ಲ. ಈ ದೇಶದ ಪ್ರಜೆಗಳಿಗೆ ಸ್ಪಷ್ಟತೆ ಮತ್ತು ಬದ್ಧತೆಯ ಅಗತ್ಯವಿದೆಯೆಂದು ಅವರು ಹೇಳಿದರು.

meeting

ದೇಶದ್ರೋಹಿಗಳ ಬಗ್ಗೆ ಎಚ್ಚರದಿಂದಿರಿ
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಮೂಲಕ ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆಯೆಂದು ಟೀಕಿಸಿದರು. ಅಲ್ಪಸಂಖ್ಯಾತರನ್ನು ಬಾವಿಗೆ ತಳ್ಳಿ ನೋಡುವವರ ಬಗ್ಗೆ ಅಲ್ಪಸಂಖ್ಯಾತರು ಎಚ್ಚರಿಕೆಯಿಂದ ಇರಬೇಕೆಂದರು.

ಪಾಕಿಸ್ತಾನದಲ್ಲಿ17 ಕೋಟಿಯಷ್ಟು ಮುಸಲ್ಮಾನರಿದ್ದರೆ, ಭಾರತದಲ್ಲಿ 23 ಕೋಟಿ ಮಂದಿ ಇದ್ದಾರೆ. ದೇಶದ್ರೋಹಿ ಭಯೋತ್ಪಾದಕರಿಗೆ ಪಾಠ ಕಲಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಯೋತ್ಪಾದಕರ ಸಂಖ್ಯೆ ಕಡಿಮೆಯಾಗಿದೆ. ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಭಯ ಉಂಟಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಭಯೋತ್ಪಾದಕ ತಾಣ ಇರುವ ಕುರಿತು ವಿಷಯ ಪ್ರಸ್ತಾಪವಾಗಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಶುಂಠಿ ಕೃಷಿ ನೆಪದಲ್ಲಿ ಜಿಲ್ಲೆಯೊಳಗೆ ಬಂದವರು ಸ್ಫೋಟಕ ಸಂಚು ರೂಪಿಸಿದ ಪ್ರಕರಣಗಳು ಈ ಹಿಂದೆ ನಡೆದಿದೆ. ಆದ್ದರಿಂದ ದೇಶ ದ್ರೋಹಿಗಳ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ಕಟ್ಟುಕಥೆ ಕಟ್ಟುತ್ತಿದೆ. ಬಹುತೇಕ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಬದುಕಲು ಬಯಸುತ್ತಿದ್ದು, ಕಾಂಗ್ರೆಸ್‌ನಿಂದಾಗಿ ಅಶಾಂತಿ ಮೂಡುತ್ತಿದೆಯೆಂದು ಆರೋಪಿಸಿದರು. ಮುಸ್ಲಿಂ ಮಹಿಳೆಯರು ನರೇಂದ್ರ್ರ ಮೋದಿಯವರಂತಹ ಪ್ರಧಾನಿಯೇ ಬೇಕೆಂದು ಬಯಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್‌ನಿಂದ ಹಾದಿ ತಪ್ಪುತ್ತಿರುವ ಬಗ್ಗೆ ಅಲ್ಪಸಂಖ್ಯಾತರು ಆಲೋಚಿಸಬೇಕಾಗಿದೆಯೆಂದು ಹೇಳಿದರು.

meeting

ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ನಿರಂತರವಾಗಿ ಬಿಜೆಪಿಯವರೇ ಶಾಸಕರಾಗಿ ಬರುತ್ತಿದ್ದಾರೆ. ಆದರೂ ಮುಸ್ಲಿಮರ ವಿರುದ್ಧ ಏನಾದರು ಗಲಾಟೆಗಳು ನಡೆದಿದೆಯೇ, ಜಿಲ್ಲೆಯಲ್ಲಿ ಸಾಕಷ್ಟು ಮಸೀದಿ ಮತ್ತು ಚರ್ಚ್‌ಗಳು ನಿರ್ಮಾಣ ಗೊಳ್ಳುತ್ತಲೆ ಇವೆ. ಇದಕ್ಕೆ ಯಾರಾದರು ವಿರೋಧ ವ್ಯಕ್ತಪಡಿಸಿದ್ದಾರೆಯೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುವ ಬದಲು, ಮುಸಲ್ಮಾನರು ಭಯೋತ್ಪಾದನೆಯ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಒತ್ತಾಯಿಸಿದರು. ಸ್ವಾಭಿಮಾನವಿದ್ದರೆ ತಕ್ಷಣ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ನಿಲ್ಲಿಸಲಿ ಎಂದು ತಿಳಿಸಿದರು.

ದೇಶ, ಧರ್ಮ ಮತ್ತು ಜಾತಿಯನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳು ಮಾಡಬಾರದೆಂದರು. ನಿಕಟ ಪೂರ್ವ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ, ವಿ.ಕೆ.ಲೋಕೇಶ್, ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರಾದ ಜಾಹೀರ್, ಜೋಕಿಂ ರಾಡ್ರಿಗಸ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ಹಾಗೂ ಮೂರು ತಾಲ್ಲೂಕು ಅಧ್ಯಕ್ಷರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English