ಬೆಂಗಳೂರು : ಪಿಎಫ್ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಹಾಗೂ ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ) ಸಂಘಟನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಬೇರೆ, ಬೇರೆ ಹೆಸರಿನಲ್ಲಿ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಇತ್ತೀಚೆಗೆ ನಡೆದ ಹಲವು ಕೊಲೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಎರಡೂ ಸಂಘಟನೆಗಳ ಮೇಲೆ ಕ್ರಮಕ್ಕೆ ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎರಡೂ ಸಂಘಟನೆಗಳ ನಿಷೇಧ ಹಾಗೂ ನಿಯಂತ್ರಣ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೂ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ ಕಳೆದ ಎಂಟು ವರ್ಷಗಳಿಂದ ನಡೆದಿ ರುವ ಕೊಲೆ ಹಾಗೂ ಕೊಲೆ ಸಂಚು, ಕಾನೂನು ಸುವ್ಯವಸ್ಥೆ ಹಾಳು ಮಾಡಲು ವ್ಯವಸ್ಥಿತ ಪಿತೂರಿ ಪ್ರಕರಣಗಳು ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿವೆ. ಹಿಂಸೆ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದರು.
ಸಿಎಎ ಪರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂದೂಪರ ಕಾರ್ಯಕರ್ತ ವರುಣ್ ಮೇಲಿನ ಮಾರಣಾಂತಿಕ ಹಲ್ಲೆ, ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಘಟನೆ, ಸಂಸದ ತೇಜಸ್ವಿ ಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಯತ್ನ ಕೃತ್ಯಗಳ ಹಿನ್ನೆಲೆಯಲ್ಲಿ ಬಂಧಿತರಾದ ಹಾಗೂ ವಶಕ್ಕೆ ಪಡೆದವರ ವಿಚಾರಣೆಯಲ್ಲಿ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಹೀಗಾಗಿ, ರಾಜ್ಯ ಸರ್ಕಾರವು ಇದನ್ನು ಗಂಭೀರ ವಾಗಿ ಪರಿಗಣಿಸಿದೆ. ಇದೇ ರೀತಿ ಹಲವಾರು ಸಂಘಟನೆಗಳು ನಾನಾ ಹೆಸರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿರುವ ಬಗ್ಗೆಯೂ ಮಾಹಿತಿ ದೊರೆತಿದೆ ಎಂದು ತಿಳಿಸಿದರು.
ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಲಷ್ಕರೆ ತೊಯ್ಬಾ ಸೇರಿದಂತೆ ಹಲವು ಸಂಘ ಟನೆಗಳ ಜತೆ ಸಂಪರ್ಕ ಸಾಧಿಸಿರುವುದು ಗೊತ್ತಾಗಿದೆ. ಹಿಂದೆ ಇದ್ದ ಸಿಮಿ ಸಂಘಟನೆಯ ರೂಪಾಂತರವಾಗಿ ಬೇರೆ, ಬೇರೆ ಹೆಸರಿನಲ್ಲಿ ಸಂಘಟನೆಗಳು ಹುಟ್ಟಿಕೊಂಡಿವೆ. ತಮಿಳುನಾಡು, ಕೇರಳದ ಕೆಲವು ಭಾಗಗಳಲ್ಲಿ ನಡೆದಿರುವ ಘಟನೆ ಗಳು, ರಾಜ್ಯದಲ್ಲಿ ನಡೆದ ಕೃತ್ಯಗಳಲ್ಲಿ ಹಲವು ಸಂಘಟನೆಗಳು ಭಾಗಿಯಾಗಿವೆ. ಪಿಎಫ್ಐ, ಎಸ್‌ಡಿಪಿಐ ಉಗ್ರಗಾಮಿ ಸಂಘಟನೆಗಳು ರಾಜಕೀಯ ವಿಭಾಗಗಳಾಗಿ ಕೆಲಸ ಮಾಡುತ್ತಿರುವ ಮಾಹಿತಿಯೂ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Click this button or press Ctrl+G to toggle between Kannada and English