ಮೈಸೂರು : ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಮಾರ್ಮಿಕವಾಗಿ ನುಡಿದರು.
ಇಂದು ಮೈಸೂರು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮೇಯರ್ ಆಯ್ಕೆಗೆ ಮತದಾನ ಮಾಡಲು ಮೈಸೂರು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣಕ್ಕೆ ಶಾಸಕ ಜಿ. ಟಿ ದೇವೇಗೌಡ ಆಗಮಿಸಿದರು. ಎಂಎಲ್ಸಿಗಳಾದ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಧರ್ಮಸೇನಾ ಸಹ ಪಾಲಿಕೆಗೆ ಆಗಮಿಸಿದರು. ಜಿಟಿ ದೇವೇಗೌಡರು ಬರುತ್ತಿದ್ದಂತೆ ಅವರನ್ನು ಪಾಲಿಕೆ ಸದಸ್ಯರು ಸುತ್ತುವರಿದು ಮಾತನಾಡಿಸಿದರು. ಈ ವೇಳೆ ಜಿ.ಟಿ.ದೇವೇಗೌಡರು ಸಂತೋಷದಿಂದಲೇ ಎಲ್ಲಾ ಪಾಲಿಕೆ ಸದಸ್ಯರನ್ನು ಮಾತನಾಡಿಸಿದರು. ಮೇಯರ್ ಅಭ್ಯರ್ಥಿ ತಸ್ಲೀಂ ಜಿ.ಟಿ ದೇವೇಗೌಡರ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡರು, ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ. ಹೈಕಮಾಂಡ್ ಅವರಿಗೆ ಹೇಳಿದ್ದನ್ನು ಅವರು ನಮಗೆ ತಿಳಿಸ್ತಾರೆ. ನಾವು ಅದನ್ನು ಪಾಲಿಸುತ್ತೇವೆ. ಮೊದಲಿನಿಂದಲೂ ಹಾಗೆ ನಡೆಸಿಕೊಂಡು ಬಂದಿದ್ದೇವೆ. ರಾಜಕೀಯದಲ್ಲಿ ಜೂನಿಯರ್, ಸೀನಿಯರ್ ಎಂಬುದಿಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಗೆ ಟಾಂಗ್ ನೀಡಿದರು.
ಜೆಡಿಎಸ್ ನ ಮೇಯರ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಿಂದ ತಮ್ಮನ್ನು ದೂರ ಇಟ್ಟಿದ್ದಕ್ಕೆ ಜಿ.ಟಿ ದೇವೇಗೌಡರು ಈ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
Click this button or press Ctrl+G to toggle between Kannada and English