ವಾಯುಮಾಲೀನ್ಯ ತಗ್ಗಿಸುವ ಇಂಧನ ಸಂಸ್ಕರಣೆಗೆ ಒತ್ತು : ಡಾ.ಎಂ.ಎಂ.ಕುಟ್ಟಿ

10:52 AM, Monday, January 20th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bengaluru

ಬೆಂಗಳೂರು : ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರ ಪ್ರದೇಶ, ಕೈಗಾರಿಕೆಗಳಿಂದ ಉತ್ಪತಿಯಾಗುವ ತ್ಯಾಜ್ಯ, ಮಾಲೀನ್ಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಬಳಸಿ ಇಂಧನ ಉತ್ಪಾದನೆ ಮಾಡುವ ತಂತ್ರಜ್ಞಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ತಂತ್ರಜ್ಞಾನ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ಎಂ.ಎಂ. ಕುಟ್ಟಿ ಹೇಳಿದ್ದಾರೆ.

ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಎಂ.ಆರ್.ಪಿ.ಎಲ್. ಸಹಯೋಗದಲ್ಲಿ ಆಯೋಜಿಸಲಾಗಿರುವ 24ನೇ ರಿಪೈನಿಂಗ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಕುರಿತ ಮೂರು ದಿನಗಳ ಜಾಗತಿಕ ಸಮ್ಮೇಳನ ಉದ್ಘಾಟಿಸಿ, ಇಂಧನ ಕಾರ್ಯಕ್ಷಮತೆ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ತೈಲ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದನ್ನು ಬಳಸಿ ಇಂಧನ ಉತ್ಪಾದಿಸಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಜತೆಗೆ ಪ್ಲಾಸ್ಟಿಕ್ ನಿಂದಲೂ ಇಂಧನ ಉತ್ಪಾದಿಸಿದರೆ ಪರಿಸರ ರಕ್ಷಣೆಗೂ ಒತ್ತು ನೀಡಿದಂತಾಗುತ್ತದೆ ಎಂದರು.

bengaluru

ಕೇಂದ್ರ ಸರ್ಕಾರ ಪರಿಸರ ಸ್ನೇಹಿ, ಶುದ್ಧ ಇಂಧನ ಉತ್ಪಾದನೆಗೆ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಿ.ಎನ್.ಜಿ. ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ದೆಹಲಿಯಲ್ಲಿ ಸಿ.ಎನ್.ಜಿ. ಬಳಕೆಯಲ್ಲಿದ್ದು, ಇದನ್ನು ದೇಶದ ಇತರೆ ರಾಜ್ಯಗಳಿಗೆ ವಿಸ್ತರಣೆ ಮಾಡಿದರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಿ.ಎನ್.ಜಿ ಉತ್ಪಾದನೆ ಮಾಡಬೇಕಾಗುತ್ತದೆ ಎಂದರು.

ವಾಹನಗಳಿಂದ ಉಂಟಾಗುವ ಮಾಲೀನ್ಯ ಕಡಿಮೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಗಾಗಿ ಸಂಶೋಧನಾ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಕಳೆದ 2018ರಲ್ಲಿ ದೆಹಲಿಯಲ್ಲಿ ಮಾಲೀನ್ಯ ಮಟ್ಟ ಕಡಿಮೆ ಮಾಡಲು ಆಧುನಿಕ ಬಿ.ಎಸ್ -6 ಪೆಟ್ರೋಲ್ ಮತ್ತು ಬಿ.ಎಸ್.-6 ಡೀಸೆಲ್ ಮಾರಾಟ ಮಾಡುತ್ತಿದ್ದು, ಇದನ್ನು ಇತರೆ ನಗರಗಳಿಗೆ ವಿಸ್ತರಿಸಲಾಗುತ್ತಿದೆ ಡಾ. ಎಂ.ಎಂ.ಕುಟ್ಟಿ ಹೇಳಿದರು.

ಇಂಧನ ಸಂಸ್ಥರಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗುತ್ತಿದ್ದು, ಮುಂದುವರೆದ ದೇಶಗಳಿಗೆ ಭಾರತ ಪೈಪೋಟಿ ನೀಡುತ್ತಿದೆ. ಈ ಕ್ಷೇತ್ರದಲ್ಲಿ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲಾಗಿದೆ. ಬರುವ 2030ರ ವೇಳೆಗೆ ಸಂಸ್ಕರಣಾ ಕ್ಷೇತ್ರದಲ್ಲಿ 150 ಶತಕೋಟಿ ಡಾಲರ್ ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

bengaluru

ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುತ್ತಿದ್ದು, ಬರುವ 2030ರ ವೇಳೆಗೆ ಪೆಟ್ರೋಲ್ ನಲ್ಲಿ ಶೇ 20 ರಷ್ಟು, ಡೀಸೆಲ್ ನಲ್ಲಿ ಶೇ 5 ರಷ್ಟು ಜೈವಿಕ ಇಂಧನ ಮಿಶ್ರಣ ಮಾಡುವ ಗುರಿ ಹೊಂದಲಾಗಿದೆ. ಎಥನಾಲ್ ಜತೆಗೆ ಗೃಹ ಬಳಕೆಗಾಗಿ ಬಯೋಗ್ಯಾಸ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಸೇರಿದಂತೆ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಸಹ ಪಳೆಯುಳಕೆ ಇಂಧನಗಳಾದ ಪೆಟ್ರೋಲ್ ಮತ್ತು ಡೀಸಲ್ ಬಳಕೆ ಕಡಿಮೆಯಾಗುವುದಿಲ್ಲ. ಈಗ ಶೇ 35 ರಷ್ಟಿರುವ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಬರುವ 2040ರ ವೇಳೆಗೆ ಶೇ 31 ಕ್ಕೆ ಇಳಿಯಬಹುದೇ ಹೊರತು ಹೆಚ್ಚಿನ ವ್ಯತ್ಯಾಸವಾಗದು ಎಂದು ಡಾ. ಎಂ.ಎಂ. ಕುಟ್ಟಿ ಹೇಳಿದರು.

ಖ್ಯಾತ ವಿಜ್ಞಾನಿ ಹಾಗೂ ಎಸ್.ಎ.ಸಿ ಅಧ್ಯಕ್ಷ ಡಾ. ಅನಿಲ್ ಕಾಕೋಡ್ಕರ್ ಮಾತನಾಡಿ, ದೇಶದ ಅರ್ಥ ವ್ಯವಸ್ಥೆ ಅನಿಲ ಆಧಾರಿತ ಇಂಧನ ಕ್ಷೇತ್ರದ ಮೇಲೆ ಅವಲಂಬಿತವಾಗಿದ್ದು, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಯೋಜನೆ ಮತ್ತು ನೀತಿ ನಿರೂಪಣೆಗಳನ್ನು ಮರು ವಿನ್ಯಾಸಗೊಳಿಸಬೇಕಾಗಿದೆ. ಕಲ್ಲಿದ್ದಲಿನಿಂದ ಇಂಧನ ಉತ್ಪಾದಿಸುವ ಕ್ಷೇತ್ರದ ಸಂಶೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಪರಿಸರ ಸ್ನೇಹಿ ಇಂಧನ ಇಂದಿನ ಅಗತ್ಯವಾಗಿದೆ ಎಂದರು.

ಜಪಾನ್ ನಲ್ಲಿ ಫುಕುಶಿಮ ದುರಂತದ ನಂತರ ಅಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲಾಗಿದ್ದು, ಇದು ಬೇರೆ ದೇಶಗಳಿಗೂ ಸಹ ಪಾಠವಾಗಿದೆ. ಬಯೋಮಾಸ್, ಜೈವಿಕ ಇಂಧನ ಉತ್ಪಾದನೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಕಾಲ ಪಕ್ವವಾಗಿದೆ. ಗ್ರಾಮೀಣ ವಲಯದಲ್ಲಿ ಬಯಾಮಾಸ್ ಬಳಕೆ ಹೆಚ್ಚಾಗಬೇಕು. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿನ ಬೆಳವಣಿಗೆಗಳು ಕಳವಳಕಾರಿಯಾಗಿದ್ದು, ಇಂಧನ ಭದ್ರತೆಗೆ ಸರ್ಕಾರ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೇಂದ್ರ ತೈಲ ಸಂಸ್ಕರಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕರಣಾ ಕ್ಷೇತ್ರದಲ್ಲಿ ಪೆಟ್ರೋ ಕೆಮಿಕಲ್ ಉತ್ಪಾದನೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು. ನಷ್ಟವನ್ನು ಕಡಿಮೆ ಮಾಡಿ, ಲಾಭದಾಯಕ ಕ್ರಮಗಳತ್ತ ಗಮನಹರಿಸಬೇಕು. ಇಂಧನ ಉತ್ಪಾದನೆಯಲ್ಲಿ ಸ್ವಚ್ಛ, ಸುರಕ್ಷಿತ, ಸ್ಮಾರ್ಟ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ತೈಲ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಬರುವ ದಿನಗಳಲ್ಲಿ ಸಂಸ್ಕರಣೆ ಕ್ಷೇತ್ರ ಸವಾಲುಗಳನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಈ ಸಮ್ಮೇಳನದಲ್ಲಿ ದೇಶ, ವಿದೇಶಗಳ 1500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. 17 ವಿದೇಶಿ ಸೇರಿದಂತೆ 27 ಪ್ರಮುಖ ಜಾಗತಿಕ ತೈಲ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ 17 ತೈಲ ಸಂಸ್ಥೆಗಳು ಪ್ರದರ್ಶನ ಮಳಿಗೆಗಳನ್ನು ತೆರೆದಿದ್ದು, ಇದರಲ್ಲಿ 10 ವಿದೇಶಿ ಕಂಪೆನಿಗಳು ಸೇರಿರುವುದು ವಿಶೇಷವಾಗಿದೆ. ಈ ಸಮ್ಮೇಳನದಲ್ಲಿ 15 ತಾಂತ್ರಿಕ ಗೋಷ್ಠಿಗಳನ್ನು ಆಯೋಜಿಸಿದ್ದು, 82 ತಾoತ್ರಿಕ ಮಾಹಿತಿಯನ್ನು ಮಂಡಿಸಲಾಗುತ್ತಿದೆ. 24 ಮಂದಿ ವಿದೇಶಿ ತಜ್ಞರು ಗೋಷ್ಠಿಯಲ್ಲಿ ತೈಲ ಕ್ಷೇತ್ರದ ಆಧುನಿಕ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ.

ಚಿತ್ರ ಶೀರ್ಷಿಕೆ: ಬೆಂಗಳೂರಿನ ಬಿಐಇಸಿಯಲ್ಲಿ 24ನೇ ರಿಫೈನಿಂಗ್, ಪೆಟ್ರೋಕೆಮಿಕಲ್ ತಂತ್ರಜ್ಞಾನ ಕುರಿತ ಮೂರು ದಿನಗಳ ಜಾಗತಿಕ ಸಮ್ಮೇಳನಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ಎಂ.ಎಂ. ಕುಟ್ಟಿ ಚಾಲನೆ ನೀಡಿದರು. ಖ್ಯಾತ ವಿಜ್ಞಾನಿ ಹಾಗೂ ಎಸ್.ಎ.ಸಿ ಅಧ್ಯಕ್ಷ ಡಾ. ಅನಿಲ್ ಕಾಕೋಡ್ಕರ್, ಕೇಂದ್ರ ತೈಲ ಸಂಸ್ಕರಣೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುನಿಲ್ ಕುಮಾರ್ ಹಾಗೂ ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English