ಮಡಿಕೇರಿ : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.
ಭಕ್ತಿಯ ಕ್ಷೇತ್ರವಾಗಿರುವ ತಲಕಾವೇರಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಬಂದು, ಹೋಗುತ್ತಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಗ್ಗೆ 7.30ರಿಂದ 8.30ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆಎಸ್‌ಆರ್‌ಟಿಸಿ ಬಸ್ ಮಾತ್ರ ತಲಕಾವೇರಿಗೆ ತೆರಳುತ್ತದೆ. ಆ ನಂತರ ಯಾವುದೇ ಬಸ್‌ಗಳ ಸಂಚಾರ ಇರುವುದಿಲ್ಲ, ಇದರಿಂದ ಭಕ್ತರು ಮಾತ್ರವಲ್ಲದೆ ಸ್ಥಳೀಯ ಗ್ರಾಮಸ್ಥರಿಗೂ ಅನಾನುಕೂಲವಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸಂಚಾರ ಅಸ್ತವ್ಯವಸ್ತಗೊಂಡ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ, ಆದರೆ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಬಸ್‌ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳಿಗೂ ಅಗತ್ಯವಿರುವಷ್ಟು ಬಸ್‌ಗಳ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಮಾಡಿದೆ. ಆದರೆ ಕನ್ನಡ ನಾಡಿನ ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಜೀವನದಿ ಕಾವೇರಿಯ ಕ್ಷೇತ್ರಕ್ಕೆ ಬಸ್‌ಗಳನ್ನೇ ನಿಯೋಜಿಸದೆ ಅನ್ಯಾಯ ಮಾಡಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಎಸ್‌ಆರ್‌ಟಿಸಿ ವ್ಯವಸ್ಥೆ ಸಾರ್ವಜನಿಕರ ಸೇವೆಗಾಗಿ ಇದೆಯೇ ಹೊರತು ಲಾಭ ಮಾಡುವುದಕ್ಕಾಗಿ ಅಲ್ಲ, ಆದ್ದರಿಂದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಖುದ್ದು ಕೆಲವು ಪತ್ರಕರ್ತರೇ ಸ್ಥಳೀಯ ಜಿ.ಪಂ ಸದಸ್ಯೆ ಕವಿತಾಪ್ರಭಾಕರ್ ಸೇರಿದಂತೆ ಪ್ರಭಾವಿ ಜನಪ್ರತಿನಿಧಿಗಳಿಗೆ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಮಾಡಿ ಬಸ್ ಸೌಲಭ್ಯದ ಕೊರತೆಯ ಬಗ್ಗೆ ಗಮನ ಸೆಳೆದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಎಲ್ಲಾ ಭಕ್ತರು ಸ್ವಂತ ವಾಹನಗಳಲ್ಲಿ ಬರಲು ಸಾಧ್ಯವಿಲ್ಲ, ಆರ್ಥಿಕವಾಗಿ ಹಿಂದುಳಿದವರು ಭಾಗಮಂಡಲದವರೆಗೆ ಬಸ್‌ನಲ್ಲಿ ಬಂದು ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ತೆರಳಬೇಕೆಂದರೆ ಜೀಪು, ಆಟೋರಿಕ್ಷಾ ಅಥವಾ ಇನ್ನಿತರ ಬಾಡಿಗೆ ವಾಹನಗಳನ್ನೇ ಅವಲಂಭಿಸಬೇಕಾಗಿದೆ. ಈ ರೀತಿಯ ವಾಹನಗಳ ಬಾಡಿಗೆ ರೂ.300 ರಿಂದ500 ವರೆಗೆ ಇದ್ದು, ಇದು ದುಬಾರಿಯಾಗಿರುವುದರಿಂದ ಭಕ್ತರು ಮಾತ್ರವಲ್ಲದೆ ಗ್ರಾಮಸ್ಥರು ಕೂಡ ಕಷ್ಟ ಅನುಭವಿಸುತ್ತಿದ್ದಾರೆ.
ಭಕ್ತರ ಮತ್ತು ಗ್ರಾಮಸ್ಥರ ಹಿತದೃಷ್ಟಿಯಿಂದ ಅಲ್ಲದಿದ್ದರೂ ಪುಣ್ಯಕ್ಷೇತ್ರ ತಲಕಾವೇರಿಯ ಭಕ್ತಿಯ ಮೇಲಿಂದಾದರು ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. ಕೇವಲ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಮಾತ್ರ ತಾಯಿ ಕಾವೇರಿಯನ್ನು ಹಾಡಿ ಹೊಗಳದೆ ಕೊಡಗಿನ ಕುಲದೇವಿಯ ದರ್ಶನ ಪಡೆಯಲು ಬರುವ ಭಕ್ತರಿಗೆ ಅಗತ್ಯ ಬಸ್ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English