ಮಡಿಕೇರಿ : ಕುಡಿತದ ದಾಸನಾಗಿದ್ದ ವ್ಯಕ್ತಿಯೋರ್ವ ಕುಡಿಯಲು ಹಣ ನೀಡಲಿಲ್ಲವೆಂದು ತಂದೆ ಹಾಗೂ ತಾಯಿಯ ಮೇಲೆ ಮರದ ತುಂಡಿನಿಂದ ಹಲ್ಲೆ ಮಾಡಿ ತಂದೆಯನ್ನು ಕೊಲೆಗೈದಿರುವ ಘಟನೆ ವರದಿಯಾಗಿದೆ.
ಸೋಮವಾರಪೇಟೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಜೇನುಕುರುಬರ ಕರಿಯಪ್ಪ (46) ಎಂಬುವವರೇ ಮಗ ಲೋಕೇಶ ಎಂಬಾತನಿಂದ ಹತ್ಯೆಗೀಡಾದ ದುರ್ದೈವಿಯಾಗಿದ್ದಾರೆ.
ಮಗನ ಹಲ್ಲೆಯಿಂದ ತಾಯಿ ಲೀಲಾ ಎಂಬುವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಲೋಕೇಶ ನಿನ್ನೆ ರಾತ್ರಿ ಕಂಠಪೂರ್ತಿ ನಿಶೆಯೇರಿಸಿ ಮನೆಗೆ ಬಂದು ತಂದೆ – ತಾಯಿ ಬಳಿ ಕುಡಿಯಲು ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ಹಣ ಕೊಡಲು ಒಪ್ಪದಿದ್ದಾಗ ಮರದ ತುಂಡಿನಿಂದ ಪೋಷಕರಿಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ಚಿಂತಾಜನಕರಾದ ತಂದೆ ಕರಿಯಪ್ಪರವರು ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ತಾಯಿ ಲೀಲಾರವರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಲೋಕೇಶನನ್ನು ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English