ಮಡಿಕೇರಿ : ಮಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್‌ನಲ್ಲಿ ಬ್ಯಾಗ್‌ವೊಂದರಲ್ಲಿ ಪತ್ತೆಯಾಗಿದ್ದ ಬಾಂಬ್ ಅನ್ನು ಸ್ಪೋಟ ಮಾಡುವಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಪ್ರಮುಖ ಪಾತ್ರವಹಿಸಿದೆ. ಈ ಕಾರ್ಯಾಚರಣೆಯಲ್ಲಿ ಕೊಡಗಿನ ಯೋಧರೊಬ್ಬರು ಕೂಡ ಕೈ ಜೋಡಿಸಿದ್ದಾರೆ.
ಮಡಿಕೇರಿ ತಾಲೂಕಿನ ಕತ್ತಲೆಕಾಡು ಗ್ರಾಮದ ನಿವಾಸಿ ಗಣೇಶ್ ಪೂಜಾರಿ(34) ಅವರು ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಾಂಬ್ ಪತ್ತೆ ಕಾರ್ಯ ಮತ್ತು ಅದನ್ನು ನಿರ್ಜನ ಪ್ರದೇಶದಲ್ಲಿ ಸ್ಫೋಟ ಮಾಡುವಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದಾರೆ.
ಕತ್ತಲೆಕಾಡು ನಿವಾಸಿ ತಿಮ್ಮಪ್ಪ ಪೂಜಾರಿ ಹಾಗೂ ಸರೋಜಾ ಪೂಜಾರಿ ಅವರ ಪುತ್ರರಾದ ಗಣೇಶ್ ಪೂಜಾರಿ 2007ರಲ್ಲಿ ಪ್ಯಾರಾ ಮಿಲಿಟರಿ ಸೇವೆಗೆ ಸೇರ್ಪಡೆಯಾಗಿದ್ದರು. ತರಬೇತಿಯ ಬಳಿಕ ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ಕೆಲವು ವರ್ಷಗಳ ಹಿಂದೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಗಾಗಿ ಕಮಾಂಡೋ ಗಣೇಶ್ ಅವರನ್ನು ನಿಯೋಜನೆ ಮಾಡಲಾಗಿತ್ತು.
ಗಣೇಶ್ ಅವರ ಪತ್ನಿ ಶಾಂತಿ ಕೂಡ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಪ್ರಸ್ತುತ ಅವರೂ ಕೂಡ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಪಾಯಿ ಆಗಿ ಸೇವೆ ಸಲ್ಲಿಸುತ್ತಿದ್ದು, ಇದಕ್ಕೂ ಮೊದಲು ದೆಹಲಿ, ಲಕ್ನೋದಲ್ಲಿ ಸೇವೆ ಸಲ್ಲಿಸಿದ್ದರು.
Click this button or press Ctrl+G to toggle between Kannada and English