ಕೆಪಿಸಿಸಿ ಪಟ್ಟಕ್ಕಾಗಿ ಡಿ.ಕೆ ಶಿವಕುಮಾರ್ ಹಾಗೂ ಎಂ.ಬಿ ಪಾಟೀಲ್ ನಡುವೆ ತೀವ್ರ ಪೈಪೋಟಿ

10:35 AM, Wednesday, January 22nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

KPCC

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಮಹತ್ವದ ನಿರ್ಧಾರಕ್ಕೆ ಬರಲು ಹೈಕಮಾಂಡ್ ಪರದಾಡುತ್ತಿದೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಎಂ.ಬಿ ಪಾಟೀಲ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಯಾರಿಗೆ ಪಕ್ಷದ ಹೊಣೆಗಾರಿಕೆ ವಹಿಸಿದರೆ ಅನುಕೂಲಕರ ಎನ್ನುವ ಬಗ್ಗೆಯೂ ಕೂಲಂಕಷವಾಗಿ ಅಧ್ಯಯನ ನಡೆಸಲು ಸಮಿತಿಯಿಂದ ವರದಿ ಪಡೆದಿತ್ತು.

ಹೈಕಮಾಂಡ್ ಸಮಿತಿ ವರದಿ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದ ಸೋನಿಯಾ ಗಾಂಧಿ, ಅಂತಿಮವಾಗಿ ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಒಲವು ತೋರಿಸಿದ್ದಾರೆ‌ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯ ಬಿಜೆಪಿ ಲಿಂಗಾಯತರನ್ನು ಓಲೈಸಿಕೊಂಡು ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದೆ. ಹಾಗಾಗಿ ನಾವು ಲಿಂಗಾಯತರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ಬಿಜೆಪಿಗೆ ಸೆಡ್ಡು ಹೊಡೆಯಲು ಅನುಕೂಲ ಎನ್ನುವ ಮೂಲಕ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಆಯ್ಕೆಗೆ ಟ್ರಬಲ್ ಆಗಿದ್ದಾರೆ.

ಡಿ.ಕೆ ಶಿವಕುಮಾರ್ ಆಯ್ಕೆಗಿಂತಲೂ ಎಂ.ಬಿ ಪಾಟೀಲ್ ಆಯ್ಕೆಯೇ ಸೂಕ್ತ, ಮುಂದಿನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬಹುದು ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಎದುರು ಸಿದ್ದರಾಮಯ್ಯ ಈ ವರಸೆ ತೆಗೆಯುತ್ತಿದ್ದ ಹಾಗೆ ಹೈಕಮಾಂಡ್ ನಾಯಕರ ಬಳಿಕ ಹಿರಿಯ ಕಾಂಗ್ರೆಸ್ಸಿಗರು ಮತ್ತೊಂದು ದಾಳ ಉರುಳಿಸಿದ್ದು, ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನದ ಜೊತೆಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನೂ ಕೊಡಲಾಗಿದೆ. ಈ ಎರಡು ಹುದ್ದೆಗಳನ್ನು ಬೇರ್ಪಡಿಸಿ, ಇಬ್ಬರಿಗೆ ಕೊಡಬಹುದು. ಇದರಿಂದ ಶಾಸಕರ ಮೇಲೆ ಹಿಡಿತ ಹಾಗು ಸರ್ಕಾರದ ವಿರುದ್ಧ ಹೋರಾಟಕ್ಕೆ ಅನುಕೂಲಕರ ಎಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಇದರಿಂದ ವಿಚಲಿತರಾಗಿರುವ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದೇ ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ನಾಲ್ವರು ಕಾರ್ಯಾಧ್ಯಕ್ಷರಾದರೆ ನಾನು ಅಧ್ಯಕ್ಷನಾಗಿ ಕೆಲಸ ಮಾಡಲ್ಲ. ನಿಮಗೆ ಬೇಕಾದವರನ್ನು ಅಧ್ಯಕ್ಷರನ್ನು ಮಾಡಿ, ನಾನು ಸಾಮಾನ್ಯ ಕಾರ್ಯಕರ್ತನಾಗಿ ಇರ್ತೇನೆ ಎಂದಿದ್ದಾರಂತೆ ಟ್ರಬಲ್ ಶೂಟರ್.ಒಟ್ಟಾರೆ ಇಬ್ಬರು ಘಟಾನುಘಟಿ ನಾಯಕರ ನಡುವೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್ ಮುಂದೇನು ಮಾಡುವುದು ಎನ್ನುವ ತೊಳಲಾಟದಲ್ಲಿ ಸಿಲುಕಿದ್ದು, ಮಹತ್ವದ ನಿರ್ಧಾರ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಕಾಂಗ್ರೆಸ್ ನಾಯಕರು ಹೈಕಮಾಂಡ್‌ಗೆ ಪತ್ರ ಬರೆಯುತ್ತಿದ್ದು, ನೇಮಕ ಮಾಡಿ, ಇಲ್ಲಾ ಹಿಂದೆ ಇದ್ದವರೇ ಮುಂದುವರಿಯಿರಿ ಎಂದು ಹೇಳಿ ಎಂದು ಒತ್ತಾಯ ಮಾಡ್ತಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English