ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ವೊಂದರಲ್ಲಿ ಸ್ಫೋಟಕ ಇರಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಮಣಿಪಾಲದ ಆದಿತ್ಯ ರಾವ್, ಮಂಗಳೂರಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿಷಯ ಬಹಿರಂಗವಾಗಿದೆ. ಆರೋಪಿ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯು ನಗರದ ಬಲ್ಮಠದ ಹೋಟೆಲ್‌ವೊಂದರಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದಾನೆ. ಹೋಟೆಲ್‌ನ ಬಿಲ್ಲಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ, ಅಚ್ಚುಕಟ್ಟಾಗಿಯೇ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯು ಕೆಲಸಕ್ಕೆ ಬರುವಾಗ ಬ್ಯಾಗ್‌ವೊಂದನ್ನು ಸದಾ ಹಿಡಿಕೊಂಡು ಬರುತ್ತಿದ್ದ. ಹೊಟೇಲ್‌ನ ಮೊದಲನೆ ಮಹಡಿಯಲ್ಲಿರುವ ಬಿಲ್ಲಿಂಗ್ ವಿಭಾಗದಲ್ಲೇ ತನ್ನ ಕುರ್ಚಿಯ ಬಳಿ ಆ ಬ್ಯಾಗ್‌ನ್ನು ಇಟ್ಟುಕೊಂಡಿರುತ್ತಿದ್ದ ಎಂಬ ಮಾಹಿತಿಯೂ ಲಭಿಸಿದೆ.
ಆರೋಪಿಯು ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ನೀಲಮಣಿ ಎನ್. ರಾಜು ಅವರ ಕಚೇರಿಗೆ ಬಂದು ಶರಣಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬೆಂಗಳೂರಿಗೆ ತೆರಳಿದೆ. ಇನ್ನೇನು ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
Click this button or press Ctrl+G to toggle between Kannada and English