ಮಡಿಕೇರಿ : ಪಶ್ಚಿಮಘಟ್ಟ ಪ್ರದೇಶದ ಕೃಷಿಗೆ ಇದೀಗ ಅಂತರರಾಷ್ಟ್ರೀಯ ಮಾನ್ಯತೆ ದೊರೆತ್ತಿದ್ದು, ಕೊಡಗಿನ ಕಾಫಿ, ಕಾಳುಮೆಣಸು, ಏಲಕ್ಕಿ, ಜೇನು, ಪುಷ್ಪ ಕೃಷಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಸಿ.ಜಿ.ಕುಶಾಲಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕೆವಿಕೆ, ಮ್ಯಾನೇಜ್, ಹೈದರಾಬಾದ್ ಸಮೇತಿ(ದಕ್ಷಿಣ), ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ ಮತ್ತು ಕೊಡಗು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೃಷಿ ಪರಿಕರ ಮಾರಾಟಗಾರರ ಕೃಷಿ ವಿಸ್ತರಣಾ ಸೇವೆಯ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಇದೀಗ 120ಮಂದಿ ಕೃಷಿ ಪರಿಕರ ಮಾರಾಟಗಾರರು ಪದವಿಯನ್ನು ಪಡೆದಿದ್ದು, ಅವರೆಲ್ಲಾ ಇನ್ನು ಮುಂದೆ ಕೊಡಗಿನ ಹೆಚ್ಚುವರಿ ಕೃಷಿ ಸೈನಿಕರಿದ್ದಂತೆ. ಕೊಡಗಿನ ಸಾಂಪ್ರದಾಯಿಕ ಕೃಷಿಯನ್ನು ಅಭಿವೃದ್ಧಿಗೊಳಿಸುವಲ್ಲಿ ಇವರ ಪಾತ್ರ ಅತಿಮುಖ್ಯ ಎಂದ ಅವರು, ರೈತರ ಆದಾಯ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶ ಇದೆ ಎಂದು ಅವರು ಹೇಳಿದರು.
ಕೃಷಿ ಸುಭಿಕ್ಷವಾದಲ್ಲಿ ದೇಶ ಸುಭಿಕ್ಷವಾದಂತೆ. ಎಲ್ಲರಿಗೂ ಅನ್ನವನ್ನು ನೀಡುವ ನಿಟ್ಟಿನಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ’ಹಸಿರು ಕ್ರಾಂತಿ’ ಕನಸು ನನಸಾಗಲು ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ವಾರ್ಷಿಕ ಬೆಳೆಯೊಂದಿಗೆ, ಬಹುವಾರ್ಷಿಕ ಬೆಳೆಯನ್ನು ಉಪ ಕಸುಬಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕೃಷಿ ಉದ್ಯಮ: ಹವಾಮಾನ ವೈಪರೀತ್ಯ ಎಲ್ಲ ದೇಶಗಳಲ್ಲಿಯೂ ಇದೆ. ಕೊಡಗು ವಿವಿಧ ಕೃಷಿ ಚಟುವಟಿಕೆಗೆ ಸೂಕ್ತ ಪ್ರದೇಶ. ಉತ್ತಮ ಮಣ್ಣು, ಉತ್ತಮ ಜನ ಇಲ್ಲಿದ್ದು, ಇದೀಗ ಜಿಲ್ಲೆಯಿಂದ ಮಹಾನಗರಗಳಲ್ಲಿ ಉದ್ಯೋಗದಲ್ಲಿರುವ ಯುವಕ ಯುವತಿಯರೂ ಕೊಡಗಿನತ್ತ ಮುಖ ಮಾಡಿದ್ದಾರೆ. ಕೃಷಿಕರು ಉದ್ಯಮಿಯಾಗಿ ಪರಿವರ್ತನೆಯಾಗಲು ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ ಎಂದು ನುಡಿದರು.
ಕೊಡಗಿನಲ್ಲಿ ಹಸಿರು ಕೃಷಿ ಉತ್ಪಾದನೆ, ಬೀಜಗಳ ಉತ್ಪಾದನೆ ಅಧಿಕಗೊಂಡಲ್ಲಿ ಯುವ ಜನಾಂಗಕ್ಕೆ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದ ಅವರು, ಇಲ್ಲಿನ ಪುತ್ತರಿ ಫಾರ್ಮರ್ಸ್ ಪರಿಕರ ಮಾರಾಟ ಸಹಕಾರ ಸಂಸ್ಥೆಯ ಮಾದರಿಯಲ್ಲಿ ಅರಣ್ಯ ಕಾಲೇಜಿನಲ್ಲಿಯೂ ಮುಂದೆ ಸ್ಥಾಪನೆ ಮಾಡಲಾಗುವದು ಎಂದರು.
ಆಸ್ಟ್ರೇಲಿಯಾದಲ್ಲಿನ ಕಾಡ್ಗಿಚ್ಚಿನ ಪರಿಣಾಮ ಅಲ್ಲಿ ನೀರಿನ ಕ್ಷಾಮವೂ ತಲೆದೋರಿದೆ. ಬಡತನ, ಕ್ಷಾಮ, ರೋಗ ಭೀತಿ, ಯುದ್ಧ ಭೀತಿ ಎಲ್ಲೆಡೆ ಮನೆ ಮಾಡಿದ್ದು ಕೊಡಗಿನಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಮುಂದೆ ಲಾಭದಾಯಕವಾಗಲಿದೆ ಎಂದು ಹೇಳಿದರು.
ಕಾನೂನು ಕುಣಿಕೆ: ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಮನ್ವಯ ಅಧಿಕಾರಿ ಸಮೇತಿ (ದಕ್ಷಿಣ) ಬೆಂಗಳೂರಿನ ಡಾ.ಜಿ.ಆರ್.ಪೆನ್ನೋಬಳ ಸ್ವಾಮಿ, ಕೊಡಗಿನ ಜನ ಹೃದಯವಂತರು, ವಿದ್ಯಾವಂತರು. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಅದೃಷ್ಟವಂತರು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಕೊಡಗಿನ ರೈತರಿಗೆ ಉತ್ತಮ ಕಾರ್ಯಕ್ರಮ ನೀಡುತ್ತಾ ಬಂದಿದೆ. ಇದೀಗ ೪೦ ಮಂದಿ ಪದವೀಧರರೂ ಒಳಗೊಂಡಂತೆ ಒಟ್ಟು ೧೨೦ ಮಂದಿ ಕೃಷಿ ಪರಿಕರ ಮಾರಾಟಗಾರರು ಇನ್ನು ಮುಂದೆ ಇಲ್ಲಿನ ಕೃಷಿಕರಿಗೆ ಉತ್ತಮ ಸೇವೆಯನ್ನು ಒದಗಿಸಬೇಕು. ತಮ್ಮ ಜಮೀನು, ತಮ್ಮ ಸುತ್ತಮುತ್ತಲಿನ ಜಮೀನಿನಲ್ಲಿ ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನಿರಂತರ ಕ್ಷೇತ್ರ ಭೇಟಿ ಮಾಡಬೇಕು. ಉತ್ತಮ ಮೊಳಕೆಯೊಡೆಯುವ ಬೀಜದ ಬಗ್ಗೆ, ಕೀಟನಾಶಕ ಸಿಂಪರಣೆ, ಗೊಬ್ಬರ ನಿರ್ವಹಣೆ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ದ್ರವದ ಗೊಬ್ಬರ ಬಳಕೆ, ನ್ಯಾನೋ ಗೊಬ್ಬರ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ ನಷ್ಟಗೊಂಡಲ್ಲಿ ಕೃಷಿ ಪರಿಕರ ವರ್ತಕರು ಕಾನೂನು ಕುಣಿಕೆಯಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ರಾಜು ಮಾತನಾಡಿ, ಈ ಹಿಂದೆ ಯಾರು ಬೇಕಿದ್ದರೂ ಕೃಷಿ ಪರಿಕರ, ಕೀಟನಾಶಕ, ರಾಸಾಯನಿಕ ಗೊಬ್ಬರ ಇತ್ಯಾದಿ ಮಾರಾಟಗಾರರಾಗಬಹುದಿತ್ತು. ಆದರೆ, ಇದೀಗ ಕಡ್ಡಾಯವಾಗಿ ಹೈದರಾಬಾದ್ ಸಂಸ್ಥೆ ಆತ್ಮ ಯೋಜನೆಯಂತೆ ಹುಟ್ಟುಹಾಕಿರುವ ಸಮೇತಿ(ದಕ್ಷಿಣ)ಯ 48 ವಾರಗಳ ತರಬೇತಿ ಹೊಂದಬೇಕಾಗಿದೆ. ಮಾರಾಟಗಾರರಿಂದ ಕೃಷಿಕರಿಗೆ ಅನ್ಯಾಯವಾಗದಂತೆ ಕಡಿವಾಣ ಹಾಕಲು ಇಂತಹ ಪದವಿ ಕೋರ್ಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧೫೫ ರಿಂದ ೧೬೦ ಆಂತರಿಕ ಕೃಷಿ ಪರಿಕರ ಮಾರಾಟಗಾರರಿದ್ದು ಇದೀಗ ೧೨೦ ಮಂದಿ ತರಬೇತಿ ಹೊಂದಿದ್ದಾರೆ. ಇನ್ನು 20 ಮಂದಿ ತರಬೇತಿಯಿಂದ ಕಾರಣಾಂತರವಾಗಿ ವಂಚಿತರಾಗಿದ್ದು ಮುಂದೆ ಹಾಸನದಲ್ಲಿ ತರಬೇತಿ ಹೊಂದಬೇಕಾಗಿದೆ ಎಂದರು.
ಗೋಣಿಕೊಪ್ಪಲು ಕೆವಿಕೆಯ ಕೃಷಿ ತಜ್ಞ ಪ್ರಭಾಕರ್, ಕೃಷಿ ತಜ್ಞ ವೀರೇಂದ್ರಕುಮಾರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಅವರ ನೇತೃತ್ವದಲ್ಲಿ ಮೂರು ತರಬೇತಿ ಕಾರ್ಯಾಗಾರಗಳು ಯಶಸ್ವಿಯಾಗಿ ಜರುಗಿದೆ. ಭಾರತದಲ್ಲಿ 2.8 ಲಕ್ಷ ಕೃಷಿ ಪರಿಕರ ಮಾರಾಟಗಾರರಿದ್ದು, ರೈತರಿಗೆ ತಪ್ಪು ಮಾಹಿತಿ ನೀಡಿದ್ದೇ ಆದಲ್ಲಿ ಆ ರೈತನ ಒಂದು ವರ್ಷದ ಕೃಷಿಕ ಜೀವನವೇ ನಾಶವಾದಂತೆ. ಈ ನಿಟ್ಟಿನಲ್ಲಿ ಮಾರಾಟಗಾರರಿಗೆ ಒಂದು ವರ್ಷ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಗೋಣಿಕೊಪ್ಪಲು ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಬಿಎಸ್‌ಸಿ ಪದವಿ, ಅಥವಾ ರಾಸಾಯನ ಶಾಸ್ತ್ರದಲ್ಲಿ ಪದವಿ ಮಾಡಿರಬೇಕು. ಈ ಬಾರಿ ಕೃಷಿ ತಜ್ಞ ವೀರೇಂದ್ರಕುಮಾರ್ ನೇತೃತ್ವದಲ್ಲಿ ಕೊಡಗಿನ 40ಕೃಷಿ ಪರಿಕರ ಮಾರಾಟಗಾರರಿಗೆ 54 ವಾರಗಳ ತರಬೇತಿ ನೀಡಲಾಗಿದ್ದು, ಸುಮಾರು 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. 34 ಮಂದಿ ಅತ್ಯುನ್ನತ ಶ್ರೇಣಿ, 4 ಮಂದಿ ಪ್ರಥಮ ದರ್ಜೆ ಹಾಗೂ ಇಬ್ಬರು ಪಾಸ್ ಆಗುವ ಮೂಲಕ ಉತ್ತಮ ಫಲಿತಾಂಶ ಬಂದಿದೆ. ಸುಮಾರು 25 ತಜ್ಞ ಶಿಕ್ಷಕರಿಂದ ತರಬೇತಿ ನೀಡಲಾಗಿದೆ. ಮಣ್ಣಿನ ಆರೋಗ್ಯ ಪರೀಕ್ಷೆ ತರಬೇತಿ, ವಿವಿಧ ಕ್ಷೇತ್ರಗಳ ಪರಿಚಯವನ್ನು ಮಾಡಲಾಗಿದೆ ಎಂದು ನುಡಿದರು.
ಮೊದಲ ಮೂರು ಸ್ಥಾನ ಪಡೆದವರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕವನ್ನು ನೀಡಲಾಯಿತು. 40ಮಂದಿಗೆ ದೃಢೀಕರಣ ಪತ್ರ ವಿತರಣೆ ಮೂಲಕ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ತಜ್ಞ ವೀರೇಂದ್ರಕುಮಾರ್ ಸ್ವಾಗತಿಸಿದರೆ, ಪ್ರಭಾಕರ್ ನಿರೂಪಿಸಿ ವಂದಿಸಿದರು.
Click this button or press Ctrl+G to toggle between Kannada and English