ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಗಳು ಆರಂಭಗೊಂಡಿದ್ದು, ಜನವರಿ 30 ರಂದು ಬೆಳಿಗ್ಗೆ 9.37 ಕ್ಕೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಫೆ. 3ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಸದ್ಯ ಸುತ್ತು ಪೌಳಿಯ ಸುಂದರೀಕರಣ ನಡೆಯುತ್ತಿದೆ. ದೇವಸ್ಥಾನದ ಸುತ್ತ ವಿಸ್ತರಣೆ ಮಾಡಲಾಗಿದೆ ಎಂದರು. ದೇವಸ್ಥಾನದ ಎದುರಿನ ರಸ್ತೆಯ ಅಗಲೀಕರಣಕ್ಕೆ ಈ ಹಿಂದೆ ಕಾನೂನಾತ್ಮಕ ತೊಡಕು ಎದುರಾಗಿತ್ತು. ಸದ್ಯ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ದೇವಸ್ಥಾನದ ಮುಂಭಾಗ ಸುಂದರ ರಥಬೀದಿ ಆಗಲಿದೆ. ಕಟೀಲು ಕ್ಷೇತ್ರದ ಅಭಿವೃದ್ಧಿಗೆಂದು ರಾಜ್ಯದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು 25 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದರು.
ಕಟೀಲಿನಲ್ಲಿ 2007ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಆ ಪ್ರಯುಕ್ತ ಕಳೆದ ವರ್ಷ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಬೇಕಿತ್ತು. ಆದರೆ ಕೆಲವೊಂದು ಕಾರಣದಿಂದ ಕಳೆದ ವರ್ಷ ಅಷ್ಟಬಂಧ ಮಾತ್ರ ಮಾಡಲಾಗಿದ್ದು, ಒಂದು ವರ್ಷ ತಡವಾಗಿ ಈಗ ಬ್ರಹ್ಮಕಲಶ ನಡೆಸಲಾಗುತ್ತಿದೆ ಎಂದರು. ದೇವಾಲಯದ ಒಳಗಿನ ಕಾರ್ಯ ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಎರಡು ಗ್ರಾಮಗಳಿಗೆ ಪೂರಕವಾದ ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿಗಳು ನಡೆದಿದೆ ಎಂದರು.
ಬೇರೆ ಬೇರೆ ಕಡೆಯಿಂದ ಬರುವ ಭಕ್ತರ ಅನುಕೂಲಕ್ಕೆ 19 ಕಡೆ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ . ಒಂದು ಗಂಟೆಯಲ್ಲಿ 25 ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಹೈಜೆನಿಕ್ ಅಡುಗೆ ಶಾಲೆ ನಿರ್ಮಾಣವಾಗಿದೆ. ಸಂಜೀವಿನಿ ಟ್ರಸ್ಟ್ ನೇತೃತ್ವದಲ್ಲಿ 1 ಕೋ. ರೂ. ನೆರವಿನಲ್ಲಿ ಶೌಚಾಲಯ ನಿರ್ಮಿಸಲಾಗಿದೆ. 24 ಗಂಟೆ ತಂಪಾದ ನೀರಿನ ವ್ಯವಸ್ಥೆ ಇದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 700 ರಾಷ್ಟ್ರೀಯ ಅಂತಾರಾಷ್ಟ್ರೀಯ ರಾಷ್ಟ್ರೀಯ ಕಲಾವಿದರು ಭಾಗವಹಿಸುವರು,
ಬ್ರಹ್ಮಕಲಶೋತ್ಸವಕ್ಕೆ 10,000 ಸ್ವಯಂಸೇವಕರು ಕೆಲಸ ನಿರ್ವಹಿಸಲಿದ್ದಾರೆ.
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲಿನ ಅನುವಂಶಿಕ ಮೊಕ್ತೇಸರರಾದ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ, ಆಡಳಿತ ಮಂಡಳಿ ಅದ್ಯಕ್ಷ, ಅನುವಂಶಿಕ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಪತ್ರಿಕಾಗೋಷ್ಠಿಯಲ್ಲಿದ್ದರು.
Click this button or press Ctrl+G to toggle between Kannada and English