ಮೀಯಪದವು ಶಿಕ್ಷಕಿಯನ್ನು ಕೊಲೆಗೈದು ಸಮುದ್ರಕ್ಕೆಸೆದ ಸಹೋದ್ಯೋಗಿ

1:36 PM, Saturday, January 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Roopasri Murderಮಂಜೇಶ್ವರ :  ಮೀಯಪದವು ಶ್ರೀ ವಿದ್ಯಾವರ್ಧಕ ಶಾಲೆಯ ಶಿಕ್ಷಕಿ ಬಿ.ಕೆ.ರೂಪಶ್ರೀ (40) ಸಾವು  ಕೊಲೆ ಕೃತ್ಯ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ರೂಪಶ್ರೀ ಅವರ ಸಹೋದ್ಯೋಗಿ, ಚಿಗುರುಪಾದೆ ನಿವಾಸಿಯಾಗಿರುವ ಶಿಕ್ಷಕ ವೆಂಕಟರಮಣ ಕಾರಂತ ಹಾಗೂ ಈತನಿಗೆ ಸಹಾಯ ಮಾಡಿದ್ದ ಕಾರು ಚಾಲಕ ನಿರಂಜನ ಎಂಬವರನ್ನು ಬಂಧಿಸಲಾಗಿದೆ.

ಆರಂಭದಿಂದಲೂ ಇದೊಂದು ಕೊಲೆ ಎಂದೇ ಜನರು ಹೇಳುತ್ತಿದ್ದರು ಹಾಗೂ ವೆಂಕಟರಮಣನ ವಿರುದ್ಧವೇ ಶಂಕೆ ಬಲವಾಗಿತ್ತು. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆಯನ್ನೂ ಮಾಡಿದ್ದರು. ವೆಂಕಟರಮಣ ಮತ್ತು ರೂಪಶ್ರೀ ನಡುವೆ ಹಣಕಾಸಿನ ವ್ಯವಹಾರ ಇತ್ತು ಮತ್ತು ಇದೇ ಕಾರಣದಿಂದ ಕೊಲೆ ಮಾಡ ಲಾಗಿದೆ ಎಂದು ಶಂಕಿಸಲಾಗಿದೆ. ಈಕೆಯನ್ನು ಆರೋಪಿಯ ಮನೆಯಲ್ಲಿ ಕೊಂದು ಕಾರಿನಲ್ಲಿ ಸಾಗಿಸಿ ಸಮುದ್ರಕ್ಕೆ ಎಸೆಯಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.

Roopashri ರೂಪಶ್ರೀಯ ನಾಪತ್ತೆಯಾಗಿದ್ದ ವ್ಯಾನಿಟಿ ಬ್ಯಾಗ್‌ ಕೂಡ ಗುರುವಾರ ಪತ್ತೆಯಾಗಿದೆ. ರೂಪಶ್ರೀ ಜ.16ರಂದು ಮಧ್ಯಾಹ್ನದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ಜ.18ರಂದು ಬೆಳಗ್ಗೆ ಕುಂಬಳೆ ಪೆರುವಾಡು ಕಡಪ್ಪುರದಲ್ಲಿ ಆಕೆಯ ಮೃತದೇಹ ಬಹುತೇಕ ನಗ್ನವಾಗಿ ಪತ್ತೆಯಾಗಿತ್ತು. ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ತಿಳಿದು ಬಂದಿತ್ತು. ಆದರೆ ಸಮುದ್ರಕ್ಕೆ ತಲುಪಿದ್ದ ಕುರಿತು ತನಿಖೆ ಅಗತ್ಯವಿದೆ ಎಂದು ಮರಣೋತ್ತರ ಪರೀಕ್ಷೆಗೆ ನೇತೃತ್ವ ವಹಿಸಿದ್ದ ಡಾ| ಕೆ. ಗೋಪಾಲಕೃಷ್ಣ ಪಿಳ್ಳೆ ಪೊಲೀಸರಿಗೆ ನಿರ್ದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಮೊದಲಿಗೆ ಮಂಜೇಶ್ವರ ಮತ್ತು ಕುಂಬಳೆ ಪೊಲೀಸರ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆದರೆ ನಿಗೂಢತೆ ಹೆಚ್ಚಾದ ಹಿನ್ನೆಲೆಯಲ್ಲಿ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಅದು ತನಿಖೆಯಲ್ಲಿ ಪ್ರಗತಿ ಸಾಧಿಸಿ, ಕೊಲೆ ಎಂದು ನಿರ್ಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಾವಿನ ಬೆನ್ನಲ್ಲೇ ರೂಪಶ್ರೀಯ ಮೊಬೈಲ್‌ ಫೋನ್‌ ನಾಪತ್ತೆಯಾಗಿತ್ತು. ಅನಂತರ ಅದನ್ನು ಬೇರೆ ಬೇರೆ ಸ್ಥಳಾಂತರಿಸಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಯುತ್ತಿದ್ದಂತೆ ಅದು ಶಿಕ್ಷಕಿಯ ಮನೆಯ ಕಿಟಿಕಿ ಪಕ್ಕದಲ್ಲಿ ಪತ್ತೆಯಾಗಿತ್ತು. ಆ ಬಳಿಕ ಆಕೆಯ ಬ್ಯಾಗ್‌ ಗುರುವಾರ ಕಣ್ವತೀರ್ಥ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ಸಿಕ್ಕಿದ ಗುರುತು ಚೀಟಿಯಿಂದ ಅದು ರೂಪಶ್ರೀಯದ್ದೆಂದು ದೃಢಪಟ್ಟಿತು.

ಜಿಲ್ಲಾ ಕ್ರೈಂ ಬ್ರಾಂಚ್‌ ಡಿವೈಎಸ್‌ಪಿ ಸತೀಶ್‌ಕುಮಾರ್‌, ಎಸ್‌.ಐ. ಬಾಬು, ಮಂಜೇಶ್ವರ ಅಡಿಶನಲ್‌ ಎಸ್‌ಐ ಪಿ.ಬಾಲಚಂದ್ರನ್‌, ಕುಂಬಳೆ ಪೊಲೀಸ್‌ ಸಿವಿಲ್‌ ಪೊಲೀಸ್‌ ಆಫೀಸರ್‌ ಪ್ರದೀಶ್‌ ಗೋಪಾಲ್‌ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣವನ್ನು ಬಯಲಿಗೆಳೆದಿದೆ.

ಶಿಕ್ಷಕಿಯನ್ನು ಮನೆಗೆ ಕರೆಸಿಕೊಂಡ ವೆಂಕಟರಮಣನು ಆಕೆಯನ್ನು ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಲೆಗೈದು ಶವವನ್ನು ಗೋಣಿಚೀಲದಲ್ಲಿ ತುಂಬಿಸಿ ಸ್ಪಿಫ್ಟ್ ಕಾರಿನಲ್ಲಿ ಕೊಂಡೊಯ್ದು ಸಮುದ್ರಕ್ಕೆ ಎಸೆದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತನಿಖಾ ತಂಡವು ತಿಳಿಸಿದೆ. ಕಾರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಕಣ್ಣೂರಿನಿಂದ ಬಂದಿರುವ ಫಾರೆನ್ಸಿಕ್‌ ತಜ್ಞರು ವೆಂಕಟರಮಣನ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಕೂದಲು ಪತ್ತೆಯಾಗಿತ್ತು. ಇದು ಕೊಲೆ ಶಂಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English