ಮಡಿಕೇರಿ ರಕ್ಷಣಾ ವೇದಿಕೆಯಿಂದ ಮುಖ್ಯಮಂತ್ರಿಗಳಿಗೆ ಮನವಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

11:39 AM, Tuesday, January 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

rakshana-vedike

ಮಡಿಕೇರಿ : ಮಡಿಕೇರಿ ನಗರದ ಸ್ಟೋನ್‌ಹಿಲ್ ಮೇಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ಸುರಕ್ಷಿತ ಮತ್ತು ಜನವಸತಿಯಿಂದ ದೂರವಿರುವ ಪ್ರದೇಶಕ್ಕೆ ಸ್ಥಳಾಂತರಿಸಿ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಡಿಕೇರಿ ರಕ್ಷಣಾ ವೇದಿಕೆಯ ಪ್ರಮುಖರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊಡಗು ಜಿಲ್ಲೆಯನ್ನು ಮಡಿಕೇರಿ ಜಿಲ್ಲೆಯೆಂದು ಕೆಲವು ಅಧಿಕಾರಿಗಳು ಉಲ್ಲೇಖಿಸುತ್ತಿದ್ದು, ಎಲ್ಲಾ ದಾಖಲೆ ಮತ್ತು ಸುತ್ತೋಲೆಗಳಲ್ಲಿ ಕೊಡಗು ಜಿಲ್ಲೆ ಎಂದೇ ಸ್ಪಷ್ಟವಾಗಿ ನಮೂದಿಸಲು ಸೂಚನೆ ನೀಡಬೇಕು. ನಗರದ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ಜನವಸತಿಯಿಂದ ದೂರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು.

ನಗರದಲ್ಲಿ ಯು.ಜಿ.ಡಿ ಕಾಮಗಾರಿ ಹೆಸರಿನಲ್ಲಿ 49ಕೋಟಿ ರೂ. ವ್ಯಯಿಸಲಾಗಿದ್ದು, ಇದರ ಬಗ್ಗೆ ಸಂಶಯಗಳು ಮೂಡಿರುವುದರಿಂದ ಸಿ.ಬಿ.ಐ ತನಿಖೆಗೆ ಒಳಪಡಿಸಬೇಕು.

ನಗರದ ಎಲ್ಲಾ ರಸ್ತೆಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವುದರಿಂದ ರಸ್ತೆ ಕಾಮಗಾರಿಗಳ ಕುರಿತು ತನಿಖೆ ನಡೆಸಬೇಕು. ಕೊಡಗಿನಾದ್ಯಂತ ನಕಲಿ ಚಾಕ್‌ಲೇಟ್ ಮತ್ತು ವೈನ್ ಮಾರಾಟವಾಗುತ್ತಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಮಡಿಕೇರಿಯ ವಿದ್ಯಾನಗರದಲ್ಲಿ 36 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯ ಕಟ್ಟಡ ಕಳಪೆ ಗುಣಮಟ್ಟದಿಂದ ಕೂಡಿದ್ದು ಇದನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳನ್ನು ಅಮಾನತುಗೊಳಿಸಬೇಕು.

ನಗರದಲ್ಲಿ ಜನೌಷಧಿ ಕೇಂದ್ರದ ತುರ್ತು ಅವಶ್ಯಕತೆ ಇದ್ದು ತಕ್ಷಣ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಅವಧಿ ಮೀರಿ ಒಂದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರುಗಳನ್ನು ತಕ್ಷಣ ವರ್ಗಾವಣೆಗೊಳಿಸಬೇಕು. ವಿದ್ಯಾನಗರದಲ್ಲಿರುವ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮಡಿಕೇರಿ ನಗರದ ಕುಡಿಯುವ ನೀರಿನ ಮೂಲವಾದ ಕುಂಡಾಮೇಸ್ತ್ರಿ ಯೋಜನೆಯಲ್ಲಿ ಹಗರಣಗಳು ನಡೆದಿರುವ ಬಗ್ಗೆ ಸಂಶಯವಿದ್ದು, ಈ ಕಾಮಗಾರಿಯ ಕುರಿತು ತನಿಖೆ ನಡೆಸಬೇಕು ಎಂದು ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದರು.

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ವೇದಿಕೆಯ ಉಪಾಧ್ಯಕ್ಷ ಕುಶ, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಖಜಾಂಚಿ ಉಮೇಶ್ ಗೌಡ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೆರ, ನಿರ್ದೇಶಕರುಗಳಾದ ಕೆ.ಎಸ್.ಜಗದೀಶ್, ಸತ್ಯ ಮತ್ತಿತರರು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English