ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆಯದ್ದೇ ತಲೆನೋವಾಗಿದೆ. ವಿವಿಧ ಕಾರಣಗಳಿಂದ ವಿಳಂಬವಾಗುತ್ತಲೇ ಇರುವ ಸಂಪುಟ ವಿಸ್ತರಣೆಯ ದಿನವನ್ನು ಯಡಿಯೂರಪ್ಪ ಜ. 29ಕ್ಕೆ ಫಿಕ್ಸ್ ಮಾಡಿದ್ದರು. ಈಗ ಅದು ಜ. 31ಕ್ಕೆ ಹೋಗಿದೆ. ಶುಕ್ರವಾರ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವೆನ್ನಲಾಗಿದೆ. ಆದರೆ, ಹೈಕಮಾಂಡ್ ಒಪ್ಪಿಗೆ ಮೇಲೆ ಎಲ್ಲವೂ ನಿಂತಿದೆ.
ಸಂಪುಟ ವಿಸ್ತರಣೆಗೆ ಸಂಭಾವ್ಯ ಸಚಿವರ ಪಟ್ಟಿಯನ್ನು ಯಡಿಯೂರಪ್ಪ ಈಗಾಗಲೇ ಬಿ.ಎಲ್. ಸಂತೋಷ್ ಮೂಲಕ ಹೈಕಮಾಂಡ್ಗೆ ತಲುಪಿಸಿದ್ಧಾರೆ. ಈ ಪಟ್ಟಿಗೆ ಹೈಕಮಾಂಡ್ ಕೂಡ ಒಪ್ಪಿತ್ತೆಂಬ ಸುದ್ದಿಗಳಿದ್ದವು. ಯಡಿಯೂರಪ್ಪ ಕೂಡ ಜ್ಯೋತಿಷಿಗಳ ಸಲಹೆ ಮೇರೆಗೆ ಜ. 29ಕ್ಕೆ ಸಂಪುಟ ವಿಸ್ತರಣೆಯ ದಿನ ನಿಗದಿ ಮಾಡಿದ್ದರು. ಆದರೆ, ಬಿಎಸ್ವೈ ಕೊಟ್ಟಿರುವ ಪಟ್ಟಿ ಬಗ್ಗೆ ಹೈಕಮಾಂಡ್ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂಬ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಜ. 30, ಗುರುವಾರದಂದು ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲಿರುವ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಜ. 30ರಂದು ಬೆಳಗ್ಗೆ 11:30ಕ್ಕೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಯಡಿಯೂರಪ್ಪ ಅವರು ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಸಂದಿಗ್ಧತೆಯಲ್ಲಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ಕೊಡುವುದೋ ಅಥವಾ ಆರ್. ಶಂಕರ್ಗೆ ಕೊಡುವುದೋ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ಸವದಿಗೆ ಟಿಕೆಟ್ ಕೊಡಬೇಕೆಂಬುದು ಹೈಕಮಾಂಡ್ ನಿಲುವಾಗಿದ್ದರೆ, ರಾಣೆಬೆನ್ನೂರು ವಿಧಾನಸಭಾ ಟಿಕೆಟ್ ತ್ಯಾಗ ಮಾಡಿದ್ದ ಆರ್. ಶಂಕರ್ ಅವರನ್ನು ನಿಲ್ಲಿಸಿ ಗೆಲ್ಲಿಸುವುದು ಯಡಿಯೂರಪ್ಪ ಅವರ ಒಲವಾಗಿದೆ. ಗುರುವಾರ ದೆಹಲಿಯಲ್ಲಿ ಜೆ.ಪಿ. ನಡ್ಡಾ ಜೊತೆ ಯಡಿಯೂರಪ್ಪ ಈ ವಿಚಾರವನ್ನೂ ಮಾತನಾಡಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ಫೆ. 17ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆ. 6 ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟೂ ಶೀಘ್ರ ಈ ಟಿಕೆಟ್ ಗೊಂದಲ ನೀಗಬೇಕಿದೆ.
Click this button or press Ctrl+G to toggle between Kannada and English