ಮಡಿಕೇರಿ : ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿಯನ್ನು ಪ್ರತಿಬಿಂಬಿಸುವ ಕೊಡವ ಕಿರುಚಿತ್ರ ’ಬಾವ ಬಟ್ಟೆಲ್’ ಗೋಣಿಕೊಪ್ಪದಲ್ಲಿ ತೆರೆ ಕಂಡಿತು. ’ಸ್ಪೈಸ್ ರ‍್ಯಾಕ್’ ಸಭಾಂಗಣದಲ್ಲಿ ಪ್ರೀಮಿಯರ್ ಶೋ ನಡೆಯಿತು. ಕಿರುಚಿತ್ರವು 34 ನಿಮಿಷಗಳ ಅವಧಿಯದ್ದಾಗಿದ್ದು, 2ಹಾಡುಗಳನ್ನು ಒಳಗೊಂಡಿದೆ.
’ಬಾವ ಬಟ್ಟೆಲ್’ ಕೊಡವ ಕಿರುಚಿತ್ರದ ನಿರ್ಮಾಪಕರಾಗಿ ಬೆಂಗಳೂರು ಮತ್ತು ಮೈಸೂರಿನ ಉದ್ಯಮಿ ಮಣವಟ್ಟಿರ ಸಂಗೀತ್ ಈರಪ್ಪ, ನಿರ್ದೇಶಕರಾಗಿ ಮಂಡುವಂಡ ಪ್ರಜ್ವಲ್ ಗಣಪತಿ, ಕಾರ್ಯಕಾರಿ ನಿರ್ಮಾಪಕರಾಗಿ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ ಹಾಗೂ ಮಾದಪಂಡ ಅಯ್ಯಣ್ಣ ಧರಣಿ ಕಾರ್ಯನಿರ್ವಹಿಸಿದ್ದಾರೆ.
ಲೇಖಕಿ ಉಳುವಂಗಡ ಕಾವೇರಿ ಉದಯ ಅವರು ಚಿತ್ರಕ್ಕೆ ಕಥೆ ಬರೆದಿದ್ದು, ತಾತಂಡ ಪ್ರಭಾ ನಾಣಯ್ಯ, ಕೊಡಗ್‌ರ ಸಿಪಾಯಿ ಚಿತ್ರದ ನಾಯಕಿ ತೇಜಸ್ವಿನಿ ಶರ್ಮ, ಚೆರುವಾಳಂಡ ಸುಜಲ ನಾಣಯ್ಯ, ಮಂಡುವಂಡ ಪ್ರಜ್ವಲ್ ಗಣಪತಿ, ಪಟ್ಟಡ ಧನುರಂಜನ್, ಮಲ್ಲಮಾಡ ಶ್ಯಾಮಲ ಸುನೀಲ್, ಬಿದ್ದಂಡ ಉತ್ತಮ್ ಪೊನ್ನಪ್ಪ, ಬೇಬಿ ಯಶಿಕ, ನೆಲ್ಲಚಂಡ ಹೇಮ ರೇಖಾ ಅಭಿನಯಿಸಿದ್ದಾರೆ.
ಖ್ಯಾತ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಹಿನ್ನೆಲೆ ಧ್ವನಿಯನ್ನು ನೀಡಿದ್ದು, ಛಾಯಾಗ್ರಾಹಕರಾಗಿ ಮೈಸೂರಿನ ಯುದಿಷ್ಠಿರ, ಸಂಕಲನಕಾರರಾಗಿ ಜಾಕ್ಸನ್ ಆರ್ನಾಲ್ಡ್ ಪಿಂಟೋ, ಸಂಗೀತ ಸಂಯೋಜಕರಾಗಿ ಮನುರಾವ್ ಕಾರ್ಯನಿರ್ವಹಿಸಿದ್ದು, ಚೋಕಿರ ಅನಿತಾ ದೇವಯ್ಯ ಚಿತ್ರದ ಸಂಭಾಷಣೆಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿದ್ದಾರೆ.
ಹಂಚಿಕೆ ಜವಾಬ್ದಾರಿಯನ್ನು ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ವಹಿಸಿಕೊಂಡಿದ್ದು, ಈ ಚಿತ್ರ ಕೊಡಗಿನಾದ್ಯಂತ ಎಲ್ಲಾ ಕೊಡವ ಸಮಾಜಗಳ ಸಹಕಾರದೊಂದಿಗೆ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.
Click this button or press Ctrl+G to toggle between Kannada and English