ರಸ್ತೆ ಕಾಮಗಾರಿ ಕಳಪೆ : ಸೂಕ್ತ ಕ್ರಮಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಒತ್ತಾಯ

10:21 AM, Friday, January 31st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

road

ಮಡಿಕೇರಿ : ನಗರದ ರಾಣಿಪೇಟೆಯಿಂದ ಮುತ್ತಪ್ಪ ದೇವಾಲಯದ ರಸ್ತೆಯನ್ನು ಇತ್ತೀಚೆಗಷ್ಟೇ ಡಾಮರೀಕರಣಗೊಳಿಸಲಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿರುವ ಮಡಿಕೇರಿ ರಕ್ಷಣಾ ವೇದಿಕೆ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಂತೆ ಒತ್ತಾಯಿಸಿದೆ.

ಕಾಮಗಾರಿ ನಡೆದ ಒಂದೇ ವಾರದಲ್ಲಿ ರಸ್ತೆ ಕಿತ್ತು ಬರುತ್ತಿದ್ದು, ಸಾರ್ವಜನಿಕರ ಹಣ ಪೋಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಹಾಗೂ ಪ್ರಮುಖರು ಗುತ್ತಿಗೆದಾರರ ಬಿಲ್ ಗೆ ಅನುಮೋದನೆ ನೀಡಬಾರದು, ಕಾಮಗಾರಿ ಉಸ್ತವಾರಿ ವಹಿಸಿದ ನಗರಸಭೆಯ ಇಂಜಿನಿಯರ್ ಮತ್ತು ಗುಣಮಟ್ಟ ಪರಿಶೀಲಿಸಿ ಸರ್ಟಿಫಿಕೇಟ್ ನೀಡಿರುವ ಹೊರ ಭಾಗದ ಇಂಜಿನಿಯರ್ ರನ್ನು ಅಮಾನತುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

road

ಇದೇ ವೇಳೆ ನಗರದ ವಿವಿಧ ಬಡಾವಣೆಗಳಿಗೆ ಪೌರಾಯುಕ್ತ ರಮೇಶ್ ಹಾಗೂ ಇಂಜಿನಿಯರ್ ವನಿತಾ ಅವರೊಂದಿಗೆ ಭೇಟಿ ನೀಡಿದ ವೇದಿಕೆಯ ಪ್ರಮುಖರು ರಸ್ತೆ ಮತ್ತು ತಡೆಗೋಡೆಗಳ ಅವಶ್ಯಕತೆಯ ಬಗ್ಗೆ ಗಮನ ಸೆಳೆದರು. ನೂತನ ನ್ಯಾಯಾಲಯ ಸಂಕೀರ್ಣಕ್ಕೆ ತೆರಳುವ ಕಾಂಕ್ರಿಟ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.

ಭಗವತಿ ನಗರದ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.2018 ರಲ್ಲಿ ಸುರಿದ ಮಹಾಮಳೆ ಸಂದರ್ಭ ಸಂತ ಜೋಸೆಫರ ಶಾಲೆಯ ರಸ್ತೆಯಲ್ಲಿ ಮನೆಯೊಂದು ಪ್ರಪಾತಕ್ಕೆ ಜಾರಿ ಹೋಗಿತ್ತು. ಈ ಪ್ರದೇಶದಲ್ಲಿ ತಡೆಗೋಡೆಯ ಅಗತ್ಯವಿದೆ ಎಂದು ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರು ಸ್ಥಳದಲ್ಲಿದ್ದ ಪೌರಾಯುಕ್ತರಿಗೆ ವಿವರಿಸಿದರು.

ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಪೌರಾಯುಕ್ತರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

road

ನಗರದ ಎಲ್ಲಾ ಬಡಾವಣೆಗಳ ರಸ್ತೆಗಳಿಗೆ ಮರು ಡಾಮರೀಕರಣ ಮಾಡಬೇಕು ಮತ್ತು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಪವನ್ ಪೆಮ್ಮಯ್ಯ ಇದೇ ಸಂದರ್ಭ ಒತ್ತಾಯಿಸಿದರು. ಈ ಸಂದರ್ಭ ವೇದಿಕೆಯ ಖಜಾಂಚಿ ಪಿ.ಉಮೇಶ್ ಗೌಡ, ಪ್ರಮುಖರಾದ ಅಜಿತ್ ಗೌಡ ಪ್ರದೀಪ್ ಕರ್ಕೆರ ಹಾಗೂ ಕುಶ ಹಾಜರಿದ್ದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English