ಮೈಸೂರು : ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಪತಿರಾಯನೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶ್ರೀನಿವಾಸ್ ಎಂಬಾತನು ಕಳೆದ 10 ವರ್ಷಗಳ ಹಿಂದೆ ಸವಿತಾ ಎಂಬುವವರನ್ನು ಮದುವೆಯಾಗಿದ್ದ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಆಗಾಗ ಇವರ ಮಧ್ಯೆ ಜಗಳ ನಡೆಯುತ್ತಲೇ ಇತ್ತಂತೆ.ಇವರಿಬ್ಬರ ಮಧ್ಯೆ ಮತ್ತೆ ಜಗಳವಾಗಿದ್ದು, ಕೋಪಗೊಂಡ ಶ್ರೀನಿವಾಸ್ ತನ್ನ ಪತ್ನಿ ಸವಿತಾ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಸವಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.ಇನ್ನು ಶ್ರೀನಿವಾಸ್, ನನ್ನ ಹೆಂಡ್ತಿಯನ್ನು ನಾನೇ ಚಾಕುವಿನಿಂದ ಇರಿದಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ. ನನ್ನನ್ನು ಮತ್ತು ಮಕ್ಕಳನ್ನು ದೂರ ಮಾಡಿ ಬೇರೊಬ್ಬರೊಂದಿಗೆ ಹೆಂಡ್ತಿ ಸವಿತಾ ಜೀವನ ನಡೆಸುತ್ತಿದ್ದಳು.
ಪ್ರತಿದಿನ ಟಿಕ್ ಟಾಕ್ ಮಾಡಿ ನನ್ನನ್ನು ಅಣುಕಿಸಿ ವಾಟ್ಸಪ್ನಲ್ಲಿ ಹೀಯಾಳಿಸುವ ಸ್ಟೋರಿ ಹಾಕುತ್ತಿದ್ದಳು. ಮಕ್ಕಳ ಹುಟ್ಟುಹಬ್ಬಕ್ಕೆ ಮನೆಗೆ ಬಂದಿದ್ದಾಗ ನಾನು ಈ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಶ್ರೀನಿವಾಸ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.ಇನ್ನು ಸವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English