ಕೊರೋನಾ ವೈರಸ್ ಬಗ್ಗೆ ಭಯ ಬೇಡ; ಅಗತ್ಯ ಮುನ್ನೆಚ್ಚರಿಕೆ ವಹಿಸಿ : ಡಾ.ಕೆ.ಮೋಹನ್ ಸಲಹೆ

9:51 AM, Monday, February 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

mohan

ಮಡಿಕೇರಿ : ಕೊರೋನಾ ವೈರಸ್ ಬಗ್ಗೆ ಭಯ ಬೇಡ. ಈ ವೈರಸ್ ಬಗ್ಗೆ ಈಗಾಗಲೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ವೈರಸ್ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೀನಾ ದೇಶದಾದ್ಯಂತ ಕೊರೋನಾ ವೈರಸ್ ಹರಡಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೈರಸ್ ಆಗಿದೆ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಹೇಳಿದರು.

ಸೋಂಕಿತರು ಸೀನಿದಾಗ, ಕೆಮ್ಮಿದಾಗ, ಸೋಂಕಿತರೊಂದಿಗೆ ನಿಕಟ ಸಂಪರ್ಕದಲ್ಲಿರುವಾಗ, ಹಸ್ತಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವಚ್ಚಗೊಳಿಸದ/ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದರಿಂದ ಹರಡಲಿದ್ದು, ಈ ಬಗ್ಗೆ ಅಗತ್ಯ ಎಚ್ಚರ ವಹಿಸಬೇಕಿದೆ ಎಂದರು.

ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಬೇಧಿ ನೋವೆಲ್ ಕೊರೋನ ವೈರಸ್‌ನ ಲಕ್ಷಣಗಳಾಗಿದೆ ಎಂದು ಡಾ.ಕೆ.ಮೋಹನ್ ಅವರು ಮಾಹಿತಿ ನೀಡಿದರು.

mohan

ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರ ಉಪಯೋಗಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಉಸಿರಾಟ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸವನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ವಿವರಿಸಿದರು.

ಕೊರೋನಾ ವೈರಸ್ ಸೋಂಕಿದ ವ್ಯಕ್ತಿಗೆ ಅತಿಸಾರ, ಶೀತ, ಜ್ವರ ಮತ್ತು ಉಸಿರಾಟದ ಸಮಸ್ಯೆಗಳು ಇರುತ್ತವೆ. ಇದಕ್ಕೆ ನಿರ್ಧಿಷ್ಟವಾದ ಚಿಕಿತ್ಸೆ ಎಂಬುದಿಲ್ಲ. ಆದರೆ ಲಕ್ಷಣಾಧಾರಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.

ಕೊರೋನಾ ವೈರಸ್ ಸೋಂಕಿನ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳಲು ಜಿಲ್ಲಾ ಕ್ಷಿಪ್ರ ಕಾರ್ಯಚರಣೆ ತಂಡವನ್ನು ನಿಯೋಜಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಯನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ತಾಲೂಕು ಮಟ್ಟದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಪಡೆ ತಂಡ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಜೊತೆಗೆ ಜಿಲ್ಲಾಸ್ಪತ್ರೆಯಲ್ಲೂ 5 ಹಾಸಿಗೆಯ ಒಂದು ವಿಶೇಷ ವಾರ್ಡ್ ತೆರೆಯಲಾಗಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ೨ ಹಾಸಿಗೆಗಳನ್ನು ಕೊರೋನ ವೈರಸ್ ಪೀಡಿತರಿಗಾಗಿಯೇ ಕಾಯ್ದಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮುಂಜಾಗ್ರತೆ ಕ್ರಮವಾಗಿ ಕಾಫಿ ಬೆಳೆಗಾರರೂ ತಮ್ಮಲ್ಲಿನ ಕಾರ್ಮಿಕರನ್ನು ಕೇರಳಕ್ಕೆ ಕಳುಹಿಸುವುದಾಗಲಿ ಅಥವಾ ಕೇರಳದಿಂದ ಕಾರ್ಮಿಕರನ್ನು ಇಲ್ಲಿಗೆ ಕರೆತರುವುದನ್ನು 15ನೇ ತಾರೀಖಿನ ವರೆಗೆ ಕರೆತರದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮನವಿ ಮಾಡಿದರು.

ಪ್ರವಾಸಿ ತಾಣವಾದ ರಾಜಾಸೀಟ್‌ನಲ್ಲಿ ಕೊರೋನಾ ವೈರಸ್ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಭಿತ್ತಿಪತ್ರವನ್ನು ಟಿಕೇಟ್ ಜೊತೆಗೆ ನೀಡಲೂ ಸಹ ವ್ಯವಸ್ಥೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು, ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಚಾರಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕೊರೋನಾ ವೈರಸ್ ಪ್ರಕರಣಗಳು ಈವರೆಗೂ ಪತ್ತೆಯಾಗಿಲ್ಲ. ಆದರೂ ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಬೇಯಿಸಿದ ಮಾಂಸಾಹಾರ ಸೇವೆಸಬೇಕು. ಹಸಿ ಮಾಂಸಗಳನ್ನು ಮುಟ್ಟಿದ ನಂತರ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು. ಜ್ವರ ಮತ್ತು ಶೀತದ ಸಮಸ್ಯೆಗಳಿದ್ದರೆ ಶೀಘ್ರವೇ ಹತ್ತಿತರದ ಆಸ್ಪತ್ರೆಗೆ ಭೇಟಿ ನೀಡುವಂತೆ ಮನವಿ ಮಾಡಿದರು.

ಪ್ರತಿ ವಿಮಾನ ನಿಲ್ದಾಣದಲ್ಲೂ ಸಹ ಕಟ್ಟೆಚ್ಚರ ವಹಿಸಲಾಗಿದೆ. ಕೊರೋನಾ ವೈರಸ್ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧೀ ಎದೆರೋಗಗಳ ಆಸ್ಪತ್ರೆ ಮತ್ತು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಮೀಸಲಿರಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಡಾ.ಲೋಕೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾದಿಕಾರಿ ಡಾ.ಆನಂದ್ ಇತರರು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English