ಮಂಗಳೂರು :ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರಗಿದ ಯುವ ವಾಹಿನಿ ಕೇಂದ್ರ ಸಮಿತಿ ರಜತ ಮಹೋತ್ಸವ ಸಮಾರಂಭದಲ್ಲಿ ಯುವ ವಾಹಿನಿ ಪ್ರಾಯೋಜಿತ ’ವಿಶುಕುಮಾರ್ ಪ್ರಶಸ್ತಿ’ಯನ್ನು ಈ ಬಾರಿ ಹಿರಿಯ ಸಾಹಿತಿ ಡಾ| ಸಂಜೀವ ಬೋಳಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ದಿ.ವಿಶುಕುಮಾರ್ ನಾಡು ಕಂಡ ಓರ್ವ ಶ್ರೇಷ್ಠ ಸಾಹಿತಿಯಾಗಿದ್ದು, ಸಾಹಿತಿ ಡಾ.ಶಿವರಾಮ ಕಾರಂತರ ಬಳಿಕ ಸಾಹಿತ್ಯದಲ್ಲಿ ಅದ್ಭುತ ಛಾಪು ಮೂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಯುವವಾಹಿನಿಯ ರಜತ ಮಹೋತ್ಸವದಂಗವಾಗಿ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಬರೆದ ’ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ’ ಪುಸ್ತಕವನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಉದಯೋನ್ಮುಖ ಬರಹಗಾರ್ತಿ ಚಂದ್ರಿಕಾ ಅವರಿಗೆ ಪತ್ರಕರ್ತ ಡಾ.ಈಶ್ವರ ಅಲೆವೂರುರವರು ಪ್ರಭಾಕರ ನೀರ್‌ಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಚಂದ್ರಿಕಾ ಬರೆದ ಸ್ವಪ್ನ ವಾಸ್ತವ ಕಾದಂಬರಿಯನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ದಿ.ವಿಶುಕುಮಾರ್ ಅವರ ಸಹೋದರ ಬಿ.ದಾಮೋದರ ನಿಸರ್ಗ ಅವರು ಬಿ.ತಮ್ಮಯ್ಯ ಅವರ ಕಾಡಿನ ಹಕ್ಕಿ ಹಾಡಿತ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಅವರು ಮಾಧವ ಅಂಚನ್ ಅವರ ಜ್ಯೋತಿರ್ನಾದ ನಾರಾಯಣ ಗುರುಗಳ ಭಕ್ತಿಗೀತೆಗಳ ಸಿಡಿಯನ್ನು ಬಿಡುಗಡೆಗೊಳಿಸಿದರು. ನಂತರ ಯುವವಾಹಿನಿ ಸಸಿಹಿತ್ಲು ಘಟಕದ ಸಹಯೋಗದೊಂದಿಗೆ ನಡೆಸಿದ ರಾಜ್ಯಮಟ್ಟದ ಕಥಾಸ್ಪರ್ಧೆಯ ಬಹುಮಾನ ವಿತರಿಸಲಾಯಿತು. ಮುದ್ದು ಮೂಡುಬೆಳ್ಳೆ, ಬಿ. ತಮ್ಮಯ್ಯ, ಮಾಧವ ಅಂಚನ್ ಮೊದಲಾದವರನ್ನು ಗೌರವಿಸಲಾಯಿತು.
Click this button or press Ctrl+G to toggle between Kannada and English