ವೃತ್ತಿಯಲ್ಲಿ ನೈಪುಣ್ಯತೆ ಪಡೆಯಿರಿ : ಶಾಸಕ ಅಪ್ಪಚ್ಚುರಂಜನ್ ಸಲಹೆ

10:49 AM, Wednesday, February 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

appacchu

ಮಡಿಕೇರಿ : ಸವಿತಾ ಮಹರ್ಷಿಯ ತತ್ವಾದರ್ಶಗಳನ್ನು ಅಳವಡಿಸಿಕೊಂಡು ವೃತ್ತಿಯಲ್ಲಿ ನೈಪುಣ್ಯತೆ ಪಡೆಯುವುದರ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಿವಿಮಾತು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ದೇವರಾಜ ಅರಸು ಭವನ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಆಚರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರ್ಥಿಕವಾಗಿ ಸಬಲರಾದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ದುಡಿದಿದ್ದನ್ನು ಕುಟುಂಬಕ್ಕೆ ಮತ್ತು ಸಮಾಜದ ಏಳ್ಗೆಗೆ ಬಳಸಬೇಕು ಎಂದು ಶಾಸಕರು ಸಲಹೆ ಮಾಡಿದರು.

appacchu

ಯಾವುದೇ ವೃತ್ತಿಯಲ್ಲಿ ಶ್ರದ್ಧೆಯಿದ್ದಲ್ಲಿ ಪರಿಪೂರ್ಣರಾಗಿ ಬದುಕು ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ, ಸಮಯ ಪ್ರಜ್ಞೆ, ಇರಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಾಸಕರು ಅಭಿಪ್ರಾಯಪಟ್ಟರು.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಜಾತಿ ಮತಗಳನ್ನು ಮೀರಿ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು. ಅವರಂತೆಯೇ ಸವಿತಾ ಮಹರ್ಷಿಗಳೂ ಸಹ ಎಲ್ಲರೂ ಒಂದೇ ಎಂದು ಸಾರಿದ ಮಹನೀಯರು ಎಂದರು. 3000ವಚನಗಳನ್ನು ರಚಿಸಿ ವಿಶ್ವಕ್ಕೆ ಜ್ಞಾನವನ್ನು ನೀಡುವ ಕಾರ್ಯ ಮಾಡಿದ್ದಾರೆ.

ಮೂಢನಂಬಿಕೆಯಿಂದ ಹೊರಬಂದು ಎಲ್ಲರಿಗೂ ಶಿಕ್ಷಣ ನೀಡುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಸವಿತಾ ಮಹಷಿಗಳು ಹೊಂದಿದ್ದರು ಎಂದು ತಿಳಿಸಿದರು.

ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕುಮಾರ್ ಅವರು ಮಾತನಾಡಿ ಸವಿತಾ ಸಮಾಜ ಪೂರ್ವದಲ್ಲಿ ವಿಜ್ಞಾನಿಗಳಾಗಿದ್ದರು. ಸಂಗೀತ ಸಂಯೋಜನೆ, ಮಾಂಗಲ್ಯ ಗಟ್ಟಿಮೇಳಕ್ಕೆ ಸವಿತಾ ಸಮಾಜದವರು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸವಿತಾ ಸಮಾಜದ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾಯಕವೇ ಕೈಲಾಸವೆಂಬಂತೆ ಕಾಯಕದಲ್ಲಿ ತೃಪ್ತಿ ಪಡೆಯಬೇಕು. ಸಮಾಜಮುಖಿಯಾಗಿ ಹಾಗೂ ಲೋಕ ಕಲ್ಯಾಣಾಕ್ಕಾಗಿ ದುಡಿಯಬೇಕಿದೆ ಎಂದು ಶ್ರೀಕುಮಾರ್ ಅವರು ತಿಳಿಸಿದರು.

appacchu

ಸವಿತಾ ಎಂದರೆ ಜ್ಞಾನ, ಬುದ್ದಿವಂತಿಕೆ ಎಂದು ಅರ್ಥ. ಜ್ಞಾನವನ್ನು ಪಡೆದು ಪ್ರೀತಿಯನ್ನು ಹರಡುವುದು, ಅವರೇ ಸವಿತಾ ಸಮಾಜದವರು ಎಂದು ಅವರು ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಪೌರಾಯುಕ್ತರಾದ ಎಂ.ಎಲ್.ರಮೇಶ್, ಬಿಸಿಎಂ ಇಲಾಖೆ ಅಧಿಕಾರಿ ಲಿಂಗರಾಜಪ್ಪ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಡಿ.ಪುಟ್ಟರಾಜು, ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಗಣೇಶ್, ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್, ಶಿವಣ್ಣ, ಮಧು, ಇತರರು ಇದ್ದರು.

ಸವಿತಾ ಸಮಾಜದ ಮುಖಂಡರು ಶಾಸಕರು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿ ಕುಶಾಲನಗರದಲ್ಲಿ ಸವಿತಾ ಸಮಾಜ ಭವನ ನಿರ್ಮಾಣಕ್ಕೆ ಜಾಗ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಸ್ವಾಗತಿಸಿದರು. ಶಂಕರಯ್ಯ ನಾಡಗೀತೆ ಹಾಡಿದರು. ಸತೀಶ್ ಮತ್ತು ತಂಡದವರು ಭಕ್ತಿಗೀತೆ ಹಾಡಿದರು. ಕುಮಾರ್ ನಿರೂಪಿಸಿದರು. ಅವಿನಾಶ್ ವಂದಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English