ನವದೆಹಲಿ : ಅಯೋಧ್ಯೆಯ ವಿವಾದಿತ ಜಾಗವನ್ನು ರಾಮ್ಲಲ್ಲಾಗೆ ನೀಡಿ ಕಳೆದ ವರ್ಷ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಮೂಲಕ ಶತಮಾನಗಳ ಹಿಂದಿನ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಟ್ರಸ್ಟ್ ರಚಿಸುವುದಾಗಿ ಸಂಸತ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇಂದು ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಘೋಷಣೆ ಮಾಡಿರುವ ಪ್ರಧಾನಿ ಮೋದಿ, ‘ ಅಯೋಧ್ಯೆ ಟ್ರಸ್ಟ್ ರಚಿಸುವ ಬಗ್ಗೆ ಇಂದು ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ನಾವೆಲ್ಲರೂ ಒಮ್ಮತದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ನಾವು ಟ್ರಸ್ಟ್ ರಚಿಸಲಿದ್ದೇವೆ. ಆ ಟ್ರಸ್ಟ್ಗೆ ‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಎಂದು ಹೆಸರಿಡಲಿದ್ದೇವೆ. ಇದು ಸಂಪೂರ್ಣವಾಗಿ ಸ್ವಾಯತ್ತ ಟ್ರಸ್ಟ್ ಆಗಿ ಕಾರ್ಯ ನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ರಾಮ ಮಂದಿರ ಭಕ್ತಾದಿಗಳಿಗೆ ಅನುಕೂಲವಾಗಲೆಂದು ನಾವು ಮತ್ತೊಂದು ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಮ ಮಂದಿರ ನಿರ್ಮಾಣವಾಗುವ ಜಾಗದ ಪಕ್ಕದಲ್ಲೇ ಕೇಂದ್ರ ಸರ್ಕಾರದಿಂದ ಟ್ರಸ್ಟ್ಗೆ 67 ಹೆಕ್ಟೇರ್ ಜಾಗವನ್ನು ನೀಡಲಾಗುವುದು ಎಂದು ಕೂಡ ಪ್ರಧಾನಿ ಮೋದಿ ಘೋಷಿಸಿದ್ದಾರೆ.
2019ರ ನವೆಂಬರ್ನಲ್ಲಿ ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ವಿವಾದಿತ ಜಾಗ ರಾಮ್ಲಲ್ಲಾಗೆ ಸೇರಿದ್ದು ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಟ್ರಸ್ಟ್ ಮೂಲಕ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಎಂದು ಆದೇಶ ಹೊರಡಿಸಿತ್ತು. ಹಾಗೇ, ಸುನ್ನಿ ವಕ್ಫ್ ಬೋರ್ಡ್ಗೆ ಉತ್ತರ ಪ್ರದೇಶದ ಪ್ರಮುಖ ಜಾಗದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ತೀರ್ಪು ಪ್ರಕಟವಾದ 3 ತಿಂಗಳೊಳಗೆ ಕೇಂದ್ರ ಸರ್ಕಾರ ಟ್ರಸ್ಟ್ ರಚಿಸಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಟ್ರಸ್ಟ್ ರಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
Click this button or press Ctrl+G to toggle between Kannada and English