ಸುಳ್ಯದಲ್ಲಿ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರಕ್ಕೆ ಚಾಲನೆ

5:44 PM, Wednesday, February 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sulya

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ದಲ್ಲಿ ನಡೆಯುವ ಒಂದು ತಿಂಗಳ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರವನ್ನು ಹಿರಿಯ ರಂಗಕರ್ಮಿ ತುಕಾರಾಂ ಏನೆಕಲ್ಲು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಅರೆ ಭಾಷೆಯಲ್ಲಿ ಈಗ ಸಾಹೇಬರು ಬರುತ್ತಾರೆ ಎಂಬ ನಾಟಕವನ್ನು ರಾಜ್ಯದ ವಿವಿಧೆಡೆ ಗಳಿಂದ ಬಂದಿರುವ ಶಿಬಿರಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ತರಬೇತಿಯನ್ನು ಪಡೆದುಕೊಳ್ಳಬೇಕು, ರಂಗಭೂಮಿಯನ್ನು ಬಂಧುವಿನಂತೆ ಪೂಜಿಸಬೇಕು, ಬದುಕಿನ ಒಂದು ಭಾಗವಾದ ನೋವು-ನಲಿವು ಸಂತೋಷ ದಂತೆ ರಂಗಭೂಮಿಯನ್ನು ಒಂದು ಭಾಗವಾಗಿಸಿಕೊಳ್ಳಬೇಕು. ರಂಗಭೂಮಿ ಜೀವನದಲ್ಲಿ ಸಮಯ ಪಾಲನೆ, ಶಿಸ್ತು ಕಲಿಸುತ್ತದೆ. ಈ ಶಿಬಿರವು ಯಶಸ್ವಿಯಾಗುವುದರ ಮೂಲಕ ಅರೆಭಾಷೆ ನಾಡಿನಾದ್ಯಂತ ಜನತೆಗೆ ಪರಿಚಯವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗತರಬೇತಿ ಶಿಬಿರದ ನಿರ್ದೇಶಕರಾದ ಜೀವನ್ ರಾಂ, ಅರೆಭಾಷೆ ಅಕಾಡೆಮಿಯ ಈ ಕಾರ್ಯ ಶ್ಲಾಘನೀಯ. ರಂಗಭೂಮಿಯಲ್ಲಿ ಅರೆ ಭಾಷೆಯನ್ನು ಪರಿಚಯಿಸುವ ದೃಷ್ಟಿಯಿಂದ ಭಾಷೆಯನ್ನು ಒಂದು ಪ್ರದೇಶದ ಚೌಕಟ್ಟಿನಿಂದ ಹೊರ ತರುವಂತಹ ಕಾರ್ಯ ಭಾಷೆಯ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದರು.

ಅರೆಬಾಷೆ ನಾಟಕವನ್ನು ನಿರ್ದೇಶನ ಮಾಡಬೇಕೆಂಬ ಹಲವು ವರ್ಷಗಳ ಕನಸನ್ನು ಈ ಬಾರಿಯ ಅಕಾಡೆಮಿಯ ತಂಡ ಮಾಡುತ್ತಿರುವುದು ಸಂತೋಷ ನೀಡಿದೆ ಎಂದರು.

sulya

ವಿಶ್ರಾಂತ ಪ್ರಾಂಶುಪಾಲರಾದ ಡಾ. ಪ್ರಭಾಕರ ಶಿಶಿಲ ಮಾತನಾಡಿ, ಭಾಷೆಯೆಂಬುದು ಜಾತಿಯನ್ನು ಬಿಟ್ಟು ಹೊರಬಂದರೆ ಮಾತ್ರ ಯಶಸ್ವಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟ ಅವರು, ರಂಗಭೂಮಿಯ ಪ್ರಭಾವ ಅದ್ಭುತ, ನಾಟಕವು ಕಾವ್ಯದ ಒಂದು ಭಾಗವಾಗಿದ್ದು, ಮನುಷ್ಯನನ್ನು ಶುದ್ಧ ಮನುಷ್ಯನಾಗಿ ಮಾಡುವ ಕೆಲಸ ರಂಗಭೂಮಿ ಮಾಡುತ್ತದೆ ಎಂದು ನುಡಿದರು.

ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ ಹೆಚ್ಚಿನ ಎಲ್ಲಾ ಭಾಷೆಗಳೂ ರಂಗಭೂಮಿಯ ಪ್ರವೇಶವಾಗಿದ್ದು, ಅರೆಭಾಷೆ ಸ್ವಲ್ಪ ಹಿನ್ನಡೆಯನ್ನು ಕಂಡಿದೆ. ಇದೀಗ ಆ ಕನಸನ್ನು ನನಸು ಮಾಡುವ ಕೆಲಸಕ್ಕೆ ಕೈ ಹಾಕಲಾಗಿದ್ದು, ಭಾಷೆಯನ್ನು ಚೌಕಟ್ಟಿನಿಂದ ಹೊರಕ್ಕೆ ಕೊಂಡೊಯ್ಯುವ ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ಗೌಡರ ಯುವಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಹಾಗೂ ಹಿರಿಯ ರಂಗಕರ್ಮಿ ಎಂ. ಎಸ್. ಜಯಪ್ರಕಾಶ್ ಪಾಲ್ಗೊಂಡಿದ್ದರು. ಧನಂಜಯ್ ಅಗೋಳಿಕಜೆ ಸ್ವಾಗತಿಸಿದರು, ಕುಸುಮಾಧರ ನಿರೂಪಿಸಿದರೆ, ವಿನೋದ್ ಮೂಡಗದ್ದೆ ಸರ್ವರನ್ನು ವಂದಿಸಿದರು.

ಮುಂದಿನ ಒಂದು ತಿಂಗಳುಗಳ ಕಾಲ ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅರೆ ಭಾಷೆ ರಂಗ ತರಬೇತಿ ಶಿಬಿರ ನಡೆಯಲಿದ್ದು ನಾಡಿನ ವಿವಿಧ ಕಡೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English