ಮಂಗಳೂರು : ಅಮರನಾಥ ಶೆಟ್ಟಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾಗಿ ಸಂಘವನ್ನು ನಡೆಸಿರುವ ಬಂಟ ಸಮಾಜದ ಮೆರು ವ್ಯಕ್ತಿತ್ವದ ಹಿರಿಯ ನಾಯಕ ಹಾಗೂ ರಾಜಕೀಯ ಮತ್ಸದ್ದಿಯಾಗಿದ್ದರು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅಭಿಪ್ರಾಯಿಸಿದ್ದಾರೆ.
ಅವರು ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಅಮರನಾಥ ಶೆಟ್ಟಿಯವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್‌ನ ಶ್ರೀರಾಮಕೃಷ್ಣ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮರನಾಥ ಶೆಟ್ಟಿ ಬಂಟ ಸಮಾಜದ ಪ್ರತಿಷ್ಠಿತ ಸಂಸ್ಥೆಯಾದ ಬಂಟರ ಯಾನೆ ನಾಡವರ ಮಾತೃ ಸಂಘವನ್ನು ನಡೆಸಿಕೊಂಡು ಬಂದ ಹಿರಿಯ ನಾಯಕರಾಗಿದ್ದರು. ಅವರು ಬಂಟ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಚಿವರಾಗಿದ್ದ ಅವರು ಪಕ್ಷಾಂತರಿ ಅಲ್ಲ. ಮೇಲು ಕೀಳು ಎನ್ನದೇ ಎಲ್ಲರಲ್ಲೂ ಸಮಾನವಾಗಿ ಮಾತನಾಡುವ ವ್ಯಕ್ತಿತ್ವ ಅವರಲ್ಲಿತ್ತು. ಅವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುವುದಾಗಿ ಅಜಿತ್‌ಕುಮಾರ್ ರೈ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ನುಡಿನಮನ ಸಲ್ಲಿಸಿದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಖಜಾಂಜಿ ಕೃಷ್ಣಪ್ರಸಾದ್ ರೈ, ಜೊತೆ ಕಾರ್ಯದರ್ಶಿ ಸಂಪಿಗೆದಡಿ , ಸಂಜೀವ ಶೆಟ್ಟಿ, ಸಂಘದ ಮಾಜಿ ಕಾರ್ಯದರ್ಶಿ ವಸಂತ ಶೆಟ್ಟಿ, ಮಾಜಿ ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಜಯರಾಮಸಾಂತ, ಉಮೇಶ್ ರೈ, ಆಶಾಜ್ಯೋತಿ ರೈ, ಆನಂದ ಶೆಟ್ಟಿ, ಕೃಷ್ಣಪ್ರಸಾದ್ ರೈ, ರತ್ನಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುಕೇಶ್ ಚೌಟ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English