ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

9:47 AM, Saturday, February 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

congress-protest

ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಆಶ್ರಮಗಳಿಗೆ ನೀಡಲಾಗುತ್ತಿದ್ದ ದಾಸೋಹದ ಧಾನ್ಯಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ, ಅನಂತಕುಮಾರ್ ಹೆಗ್ಡೆ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಬಿಜೆಪಿ ಜನಪ್ರತಿನಿಧಿಗಳು ತಮ್ಮ ಮನಸ್ಸಿನ ಮೇಲಿನ ಹತೋಟಿಯನ್ನು ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಇದ್ದ ಸಂದರ್ಭ ಮಠ, ಆಶ್ರಮಗಳಿಗೆ ಸಮರ್ಪಕವಾಗಿ ದಾಸೋಹದ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಯೋಜನೆಯನ್ನು ತಡೆಹಿಡಿದು ಬಡವರ ಹೊಟ್ಟೆಗೆ ಒಡೆಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಕೇವಲ ಅಧಿಕಾರಕ್ಕಾಗಿ ಹಪಹಪಿಸುತ್ತಿದ್ದು, ಕೀಳು ಮನೋಸ್ಥಿತಿ ಹೊಂದಿರುವ ಬಿಜೆಪಿ ನಾಯಕರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದರು.

congress-protest

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಸಂಸದ ಅನಂತಕುಮಾರ್ ಹೆಗಡೆ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವಿಕೃತ ಗುಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು. ಅಹಿಂಸಾತ್ಮಕ ಹಾಗೂ ಸತ್ಯದ ಹಾದಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ಹೀಯಾಳಿಸಿ, ಅವಮಾನಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಆಶ್ರಮಗಳಿಗೆ ಆಹಾರ ಧಾನ್ಯ ಪೂರೈಕೆ ನಿಂತಿತ್ತು ಎಂಬ ಸುಳ್ಳು ಮಾಹಿತಿ ನೀಡಲು ಹೋಗಿ ಇಂದು ಸಿಕ್ಕಿ ಹಾಕಿಕೊಂಡು ಚಡಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಅನಂತಕುಮಾರ್ ಹೆಗ್ಡೆ, ಶಶಿಕಲಾ ಜೊಲ್ಲೆ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರವೇ ಜನತೆಯ ಕ್ಷಮೆಯಾಚಿಸಬೇಕು ಮತ್ತು ವಿವಾದಕ್ಕೆ ಸಿಲುಕಿರುವ ಇಬ್ಬರನ್ನು ವಜಾಗೊಳಿಸಬೇಕು ಎಂದು ಮಂಜುನಾಥ್ ಕುಮಾರ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ಹಿರಿಯ ಮುಖಂಡ ಮಿಟ್ಟುಚಂಗಪ್ಪ, ಸದಸ್ಯರಾದ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ವಕ್ತಾರ ಟಿ.ಈ.ಸುರೇಶ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುರಯ್ಯ ಅಬ್ರಾರ್, ರಾಹುಲ್ ಬ್ರಿಗೇಡ್‌ನ ಅಧ್ಯಕ್ಷ ಚುಮ್ಮಿದೇವಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಯೋಜಕ ತೆನ್ನಿರಾ ಮೈನಾ, ಸಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಡಿ.ಸಿ.ಸಿ. ಉಪಾಧ್ಯಕ್ಷ ಎಂ.ಎಸ್.ಪೂವಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಯುವ ಘಟಕದ ಜಿಲ್ಲಾಧ್ಯಕ್ಷ ಎಸ್.ಇ.ಹನೀಫ್, ಯುವ ಕಾಂಗ್ರೆಸ್ ಅಧ್ಯಕ್ಷ ಸದಾಮುದ್ದಪ್ಪ, ಹಿಂದುಳಿದ ವರ್ಗಗಳ ಮಡಿಕೇರಿ ನಗರ ಅಧ್ಯಕ್ಷ ಕೆ.ಜಿ.ಜಗದೀಶ್, ಸೇವಾದಳದ ಅಧ್ಯಕ್ಷೆ ಪ್ರೇಮಾಕೃಷ್ಣಪ್ಪ, ನಗರಸಭಾ ಮಾಜಿ ಸದಸ್ಯರಾದ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಸಿದ್ದಾಪುರ ಗ್ರಾ.ಪಂ. ಸದಸ್ಯೆ ದೇವಜಾನ್, ಪ್ರಮುಖರಾದ ಮಿನಾಜ್ ಪ್ರವೀಣ್, ಗಾಯತ್ರಿ ನರಸಿಂಹ ಹಾಗೂ ಎಲ್ಲಾ ಬ್ಲಾಕ್ ಅಧ್ಯಕ್ಷರು, ಸದಸ್ಯರು, ನಗರಸಭಾ ಮಾಜಿ ಸದಸ್ಯರು, ಜಿ.ಪಂ. ಸದಸ್ಯರು ಪಾಲ್ಗೊಂಡಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English