ಶಬರಿಮಲೆ ಅಯ್ಯಪ್ಪಸ್ವಾಮಿ ದೇವರ ಆಭರಣಗಳ ಪಟ್ಟಿ ತಯಾರಿಸಲು ಆದೇಶ

2:05 PM, Saturday, February 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ayyappa

ನವದೆಹಲಿ : ಕೇರಳದ ಪಂದಳಂ ರಾಜಮನೆತನದ ಆಂತರಿಕ ಕಲಹಗಳಿಂದಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವರ ಆಭರಣಗಳ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅಯ್ಯಪ್ಪಸ್ವಾಮಿಗೆ ಸೇರಿರುವ ಎಲ್ಲ ಆಭರಣಗಳ ಸಮಗ್ರ ಪಟ್ಟಿ ತಯಾರಿಸಲು ಆದೇಶಿಸಿದೆ.

ಕೇರಳ ಹೈಕೋರ್ಟ್ನ ನಿವೃತ್ತ ಜಡ್ಜ್ ಸಿ.ಎನ್. ರಾಮಚಂದ್ರನ್ ನಾಯರ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ನಾಲ್ಕು ವಾರದೊಳಗೆ ಪಟ್ಟಿ ಸಲ್ಲಿಸಬೇಕು ಎಂದು ಕೋರ್ಟ್ ಶುಕ್ರವಾರ ಆದೇಶಿಸಿದೆ.

ದೇವರ ಆಭರಣಗಳ ಉಸ್ತುವಾರಿ ಮತ್ತು ದೇವಸ್ಥಾನ ಆಡಳಿತಕ್ಕಾಗಿ ಸಮಿತಿ ನೇಮಿಸುವಂತೆ ಕೋರಿ ಪಂದಳಂ ರಾಜಮನೆತನದ ಕೆಲವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ. ಅಯ್ಯಪ್ಪ ದೇವಸ್ಥಾನ ಮಂಡಳಿಯ ಹಿರಿಯ ಸದಸ್ಯರು ಆಭರಣಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಆರೋಪಿಸಿರುವ ಪಂದಳಂ ರಾಜಮನೆತನದ ಸದಸ್ಯ ರಾಜರಾಜ ವರ್ವ, ತಮ್ಮ ಸುಪರ್ದಿಗೆ ಆಭರಣಗಳನ್ನು ನೀಡುವಂತೆ ಕೋರಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಭರಣಗಳು ರಾಜಮನೆತನ ಸೇರಿ ಯಾರಿಗೂ ಸೇರಿದ್ದಲ್ಲ.

ಅವುಗಳು ಭಗವಾನ್ ಅಯ್ಯಪ್ಪನಿಗೆ ಸೇರಿದವು. ರಾಜಮನೆತನದ ವಶದಲ್ಲಿದ್ದರೂ ಆಭರಣಗಳು ಸುರಕ್ಷಿತವಾಗಿರಬೇಕೆಂಬುದು ನಮ್ಮ ಕಾಳಜಿ ಎಂದು ಹೇಳಿದೆ.

ದೇವಾಲಯದ ವ್ಯವಹಾರಗಳಲ್ಲಿ ಕೇರಳ ಸರ್ಕಾರ ಹಸ್ತಕ್ಷೇಪ ಮಾಡಿದೆ ಎಂದು ಪಂದಳಂ ರಾಜಮನೆತನದ ಪರ ಹಾಜರಾಗಿದ್ದ ವಕೀಲರು ಆರೋಪಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕೇರಳ ಸರ್ಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಪದ್ಮನಾಭಸ್ವಾಮಿ ದೇವಸ್ಥಾನದ ನಿಧಿಯಲ್ಲಿ ನಡೆದಿದ್ದ ಅಕ್ರಮದ ಉದಾಹರಣೆ ನೀಡಿ, ಅಯ್ಯಪ್ಪನ ಆಭರಣಗಳನ್ನು ನಕಲಿ ಆಭರಣಗಳ ಜತೆ ಬದಲಾಯಿಸುವುದಿಲ್ಲ ಎಂಬುದಕ್ಕೆ ಖಚಿತತೆ ಏನು? ಎಂದು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸಲಹೆ ಮೇರೆಗೆ ಸುಪ್ರೀಂಕೋರ್ಟ್ ಎಲ್ಲ ಆಭರಣಗಳ ಪಟ್ಟಿ ತಯಾರಿಸಿ ನೀಡಲು ಹೈಕೋರ್ಟ್ನ ನಿವೃತ್ತ ಜಡ್ಜ್ ಸಿ.ಎನ್. ರಾಮಚಂದ್ರನ್ ನಾಯರ್ ಅವರನ್ನು ನೇಮಕ ಮಾಡಿದೆ. ವಿವಾದ ಬಗೆಹರಿಯುವವರೆಗೆ ಆಭರಣಗಳನ್ನು ನೋಡಿಕೊಳ್ಳಲು ಪಾಲಕರನ್ನು ಸಹ ನೇಮಿಸುವ ಸಾಧ್ಯತೆ ಇದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English