ಇಂದು ಕರ್ನಾಟಕ ಬಂದ್ ‌: 600ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

10:56 AM, Thursday, February 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

karnataka

ಬೆಂಗಳೂರು : ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ಸರಕಾರಿ ಮತ್ತು ಖಾಸಗಿ ವಲಯ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿ ಅತ್ಯಗತ್ಯವಾಗಿದ್ದು, ಬಂದ್‌ ಮೂಲಕ ಸರಕಾರದ ಮೇಲೆ ಒತ್ತಡ ಹೇರುವುದು ಉದ್ದೇಶ. ಬಂದ್‌ಗೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸಾರಿಗೆ, ಸರಕು ಸಂಬಂಧಿತ ಸೌಲಭ್ಯಗಳು ವ್ಯತ್ಯಯವಾಗುವ ಆತಂಕ ಇದೆ.

ಸಂಚಾರಿ ಸೇವೆಗಳಾದ ಓಲಾ, ಉಬರ್‌, ಖಾಸಗಿ ಬಸ್‌ಗಳ ಸಂಘಟನೆ ಗಳು ನೇರವಾಗಿ ಬೆಂಬಲ ನೀಡಿವೆ. ಹೀಗಾಗಿ ಖಾಸಗಿ ಬಸ್‌, ಟ್ಯಾಕ್ಸಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಆದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇಲ್ಲ. ಉಳಿದಂತೆ ರಾಜ್ಯ ಪೆಟ್ರೋಲ್‌ ಬಂಕ್‌ ಮಾಲಕರ ಸಂಘ ಮತ್ತು ಹೊಟೇಲ್‌ ಮಾಲಕರ ಸಂಘಗಳು ನೈತಿಕವಾಗಿ ಬೆಂಬಲ ಸೂಚಿಸಿವೆ. ಆದರೆ ಸೇವೆ ಎಂದಿನಂತೆ ಇರಲಿದೆ.

ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದರೂ ಬಸ್‌ ಸೇವೆ ಸ್ಥಗಿತಗೊಳಿಸುವುದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಬಂದ್‌ಗೆ ಸಂಬಂಧಿಸಿ ಗುರುವಾರ ಶಾಲಾ ಕಾಲೇಜುಗಳಿಗೆ ರಜಾ ಘೋಷಿಸಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಆಯಾ ಜಿಲ್ಲಾಡಳಿತಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ ಎಂದೂ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೂಚನೆ ನೀಡಿದ್ದಾರೆ.

ಗುರುವಾರದ ರಾಜ್ಯವ್ಯಾಪಿ ಬಂದ್‌ ಕರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಕಡಿಮೆ. ಸರಕಾರಿ ಮತ್ತು ಖಾಸಗಿ ಬಸ್‌ ಸಂಚಾರ ಎಂದಿನಂತೆ ಓಡಾಟ ನಡೆಸುವ ಸಾಧ್ಯತೆ ಇದ್ದು, ಶಾಲಾ-ಕಾಲೇಜುಗಳು ಕಾರ್ಯಾಚರಿಸಲಿವೆ ಎನ್ನಲಾಗಿದೆ.

ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಗಳು ನಡೆಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು. ಹೀಗಾಗಿ ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಪರೀಕ್ಷೆ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ರಾಜ್ಯದ ಕೆಲವು ವಿಶ್ವ  ವಿದ್ಯಾಲಯಗಳು ಕೂಡ ಪರಿಸ್ಥಿತಿ ಅವಲೋಕಿಸಿ ಪರೀಕ್ಷೆ ಮುಂದೂಡಿಕೆಯಂಥ ಕ್ರಮಕೈಗೊಳ್ಳಬಹುದು ಎನ್ನಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English