ಮಂಗಳೂರು : ಮದುವೆ ಆಗುವ ಭರವಸೆ ನೀಡಿ, ಬಳಿಕ ಅತ್ಯಾಚಾರ ಎಸಗಿ ಸೈನೈಡ್ ಬಳಕೆ ಮಾಡಿಕೊಂಡು ಹತ್ಯೆ ಮಾಡಿರುವ 19ನೇ ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.
2006ರಲ್ಲಿ ಮೋಹನ್ ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದ ಸಂದರ್ಭ ಕೇರಳ ರಾಜ್ಯದ ಕಾಸರಗೋಡಿನ 23 ವರ್ಷದ ಯುವತಿಯ ಪರಿಚಯ ಆಗಿತ್ತು. ಆ ವೇಳೆ ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ 2006ರ ಜೂನ್ 3 ರಂದು ಆಕೆಯನ್ನು ಪುಸಲಾಯಿಸಿ ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.
ಮರುದಿನ ಬೆಳಗ್ಗೆ ದೇವಸ್ಥಾನಕ್ಕೆಂದು ಹೇಳಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಆಕೆಗೆ ಸೈನೈಡ್ ಸೇವನೆ ಮಾಡಿಸಿದ್ದ. ಅದೇ ವೇಳೆ ಶೌಚಾಲಯಕ್ಕೆ ಹೋಗಿದ್ದ ಯುವತಿ ಸೈನೈಡ್ ಸೇವಿಸಿದ್ದರಿಂದ ಕುಸಿದು ಬಿದ್ದಿದ್ದಳು. ಮಾಹಿತಿ ತಿಳಿದ ಪೊಲೀಸ್ ಸಿಬ್ಬಂದಿ ಬಸವರಾಜ್, ಕುಸಿದು ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಯುವತಿ ಸಾಗಿವೀಡಾಗಿದ್ದಳು.
ಇನ್ನು ಯುವತಿ ಮನೆಗೆ ವಾಪಸ್ ಆಗದ ಹಿನ್ನೆಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಪ್ರಕರಣದ ಶಿಕ್ಷೆಯ ಪ್ರಮಾಣವು ಫೆ.15ರಂದು ಪ್ರಕಟಗೊಳ್ಳಲಿದೆ.
Click this button or press Ctrl+G to toggle between Kannada and English