ಬೆಂಗಳೂರು : ಬಿಜೆಪಿ ಪಕ್ಷದ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹ ಎಂದು ಹೇಳುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಸಿಎಂ ಬಿಎಸ್ವೈ ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನ ಪಡೆಯಲು ರಮೇಶ್ ಜಾರಕಿಹೊಳಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಈ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ. ಇದೀಗ ಕೊನೆಯ ಪ್ರಯತ್ನ ಎನ್ನುವಂತೆ ಉಮೇಶ್ ಕತ್ತಿ ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರ ಬಳಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಈ ಕುರಿತು ವಿಧಾನಸೌಧದಲ್ಲಿ ಹೇಳಿಕೆ ನೀಡಿರುವ ಸಚಿವ ರಮೇಶ್ ಜಾರಕಿಹೊಳಿ, “ಬಿಜೆಪಿ ಪಕ್ಷದಲ್ಲಿ ಉಮೇಶ್ ಕತ್ತಿ ಬಹಳ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹವೂ ಕೂಡ. ಅವರಿಗೂ ಸಚಿವ ಸ್ಥಾನ ಸಿಕ್ಕರೆ ಬೆಳಗಾವಿಗೆ ಮತ್ತೊಂದು ಸ್ಥಾನ ಲಭ್ಯವಾದಂತಾಗುತ್ತದೆ. ಇದು ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, “ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿಯೇ ಬೇಕು ಅಂತಾ ಕೇಳಿಲ್ಲ. ಇದೇ ಕಾರು, ಇದೇ ಕೊಠಡಿ ಬೇಕು ಅಂತಾನೂ ಕೇಳಿಲ್ಲ. ಸಿಎಂ ಯಾವುದನ್ನ ಕೊಟ್ಟಿದ್ದಾರೋ ಅದನ್ನ ತೆಗೆದುಕೊಂಡಿದ್ದೇನೆ ಅಷ್ಟೇ” ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಹೋದರ ಸತೀಶ್ ಜಾರಕಿಹೊಳಿ ವಿರುದ್ದ ಕಿಡಿಕಾರಿರುವ ಅವರು, “ಸತೀಶ್ ಜಾರಕಿಹೊಳಿ ದುರುದ್ದೇಶದೊಂದಿಗೆ ಮಾತನಾಡುವುದನ್ನು ಬಿಡಲಿ. ಅವರು ತಾಳ್ಮೆಯಿಂದ ಒಳ್ಳೆಯ ತನದಿಂದ ನಡೆದರೆ ಅವರಿಗೆ ಕಾಂಗ್ರೆಸ್ನಲ್ಲಿ ಉತ್ತಮ ಭವಿಷ್ಯ ಇದೆ.
ಇನ್ನೂ ಅವರು ನನ್ನನ್ನು ಬಿಜೆಪಿ ನಿಯಂತ್ರಣದಲ್ಲಿ ಇರಬೇಕು ಎಂದಿದ್ದಾರೆ. ಆದರೆ ನಾನು ಸತೀಶ್ಗೆ ಕೆಲಸ ಮಾಡಿ ತೋರಿಸುತ್ತೇನೆ. ನನಗೂ 6 ಬಾರಿ ಶಾಸಕನಾದ ಅನುಭವ ಇದೆ, ಬುದ್ಧಿಯೂ ಇದೆ” ಎಂದು ಸಿಡಿಮಿಡಿಗೊಂಡಿದ್ದಾರೆ.
Click this button or press Ctrl+G to toggle between Kannada and English