ಹೊಸದಿಲ್ಲಿ : ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ (52 ಕೆಜಿ ವಿಭಾಗ) ನೂತನ “ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್’ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಬಾಕ್ಸರ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ಬಾಕ್ಸರ್ ಓರ್ವ ಅಗ್ರಸ್ಥಾನಕ್ಕೆ ನೆಗೆದದ್ದು ಇದೇ ಮೊದಲು.
2009ರಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು (72 ಕೆಜಿ ವಿಭಾಗ).
24ರ ಹರೆಯದ ಅಮಿತ್ ಪಂಘಲ್ ಒಟ್ಟು 420 ಅಂಕ ಹೊಂದಿದ್ದಾರೆ ಎಂದು ಇಂಟರ್‌ನ್ಯಾಶನಲ್ ಒಲಿಂಪಿಕ್ ಕಮಿಟಿಯ (ಐಒಸಿ) ಬಾಕ್ಸಿಂಗ್ ಟಾಸ್ಕ್ ಫೋರ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಅಮಿತ್ ಪಂಘಲ್ 2018ರ ಕಾಮನ್‌ವೆಲ್ತ್ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಶ್ಯನ್ ಒಲಿಂಪಿಕ್ ಕ್ವಾಲಿಫೈಯರ್ ಸ್ಪರ್ಧೆ ಮುಂದಿನ ತಿಂಗಳು ಅಮ್ಮಾನ್ ಮತ್ತು ಜೋರ್ಡಾನ್‌ನಲ್ಲಿ ನಡೆಯಲಿದೆ.
ವನಿತಾ ರ್‍ಯಾಂಕಿಂಗ್‌ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆಜಿ) 225 ಅಂಕಗಳೊಂದಿಗೆ 5ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಇವರ ನಿಕಟ ಸ್ಪರ್ಧಿ ನಿಖತ್ ಜರೀನ್ 22ನೇ ಸ್ಥಾನಿಯಾಗಿದ್ದಾರೆ (75 ಅಂಕ). 69 ಕೆಜಿ ವಿಭಾಗದ ಲೊವಿÉನಾ ಬೊರ್ಗೊಹೈನ್ 3ನೇ ಸ್ಥಾನಿಯಾಗಿರುವುದು ಭಾರತದ ವನಿತಾ ವಿಭಾಗದ ಅತ್ಯುತ್ತಮ ರ್‍ಯಾಂಕಿಂಗ್ ಆಗಿದೆ.
ನನ್ನ ಪಾಲಿಗೆ ಇದೊಂದು ಮಹಾನ್ ಗೌರವ. ವಿಶ್ವದ ಅಗ್ರಸ್ಥಾನ ಎನ್ನುವುದು ಯಾವತ್ತೂ ಹೊಸ ಸ್ಫೂರ್ತಿ ತುಂಬುತ್ತದೆ. ಮುಂದಿನ ಮೊದಲ ಅರ್ಹತಾ ಸ್ಪರ್ಧೆಯಲ್ಲೇ ಟೋಕಿಯೊ ಒಲಿಂಪಿಕ್ ಟಿಕೆಟ್ ಪಡೆಯುವ ಗುರಿ ನನ್ನದು. ಎಂದು ಅಮಿತ್ ಪಂಘಲ್ ಹೇಳಿದ್ದಾರೆ.
Click this button or press Ctrl+G to toggle between Kannada and English