ಗಾಂಧಿನಗರ : ಗೂಬೆ ಹಿಡಿದು ಟಿಕ್ ಟಾಕ್ ಮಾಡಿದ ಯುವತಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಈ ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ. ಸೂರತ್ ನಿವಾಸಿ ಕೀರ್ತಿ ಪಟೇಲ್ ದಂಡ ಪಾವತಿಸಿದ ಯುವತಿ. ಕೀರ್ತಿ ಪಟೇಲ್ ಇತ್ತೀಚೆಗೆ ಗೂಬೆ ಹಿಡಿದು ವಿಡಿಯೋ ಮಾಡಿ ತನ್ನ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.ಕೀರ್ತಿ ಪಟೇಲ್, ತನ್ನ ವಿಡಿಯೋದಲ್ಲಿ ಗೂಬೆಗಳನ್ನು ಮನುಷ್ಯನಿಗೆ ಹೋಲಿಕೆ ಮಾಡಿದ್ದಳು. ರಾತ್ರಿ ವೇಳೆ ಮಾತ್ರ ಗೂಬೆಗಳಿಗೆ ದೃಷ್ಟಿ ಇರುತ್ತದೆ. ಅವು ಕೆಟ್ಟ ಸಂಗತಿಗಳನ್ನು ನೋಡುವುದಿಲ್ಲ. ಆದರೆ ನಮಗೆ 24 ಗಂಟೆಯೂ ದೃಷ್ಟಿ ಇದ್ದರೂ ಕೆಟ್ಟ ಕೆಲಸಗಳನ್ನೇ ಮಾಡುತ್ತೇವೆ ಎಂದು ಹೇಳಿದ್ದರು.
ಕೀರ್ತಿ ಪಟೇಲ್ ಅಳಿವಿನಂಚಿನಲ್ಲಿರುವ ವಿಶಿಷ್ಟ ಗೂಬೆ ಹಿಡಿದು ಟಿಕ್ ಟಾಕ್ ಮಾಡಿದ್ದಕ್ಕೆ ಪ್ರಾಣಿ ಪ್ರಿಯರು ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರವಾಗಿ ವನ್ಯ ಜೀವಿ ಹಾಗೂ ಪ್ರಕೃತಿ ಕಲ್ಯಾಣ ಟ್ರಸ್ಟ್ ಅರಣ್ಯ ಇಲಾಖೆಗೆ ದೂರು ನೀಡಿತ್ತು.ವಿಡಿಯೋವನ್ನು ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. 1972ರ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದ ಕೀರ್ತಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, 25 ಸಾವಿರ ರೂ. ದಂಡ ವಿಧಿಸಿದ್ದಾರೆ.
Click this button or press Ctrl+G to toggle between Kannada and English