ಮೈಸೂರು : ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯ ಅಧಿಕಾರ ಇದ್ದರೂ ಕೂಡ ವಂಶದ ಹಿತಾಸಕ್ತಿಗಾಗಿ ಕೆಲಸ ಮಾಡದ ರಾಜಪ್ರಭುತ್ವ. ಈಗ ಪ್ರಜಾಪ್ರಭುತ್ವದ ಒಳಗೇನೇ ವಂಶದ ಹಿತಾಸಕ್ತಿ ಮತ್ತು ವಂಶದ ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದರು.
ಅವರಿಂದು ಮೈಸೂರು ಸರಸ್ವತಿಪುರಂದಲ್ಲಿರುವ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜಗದ್ಗುರು ಶ್ರೀವೀರ ಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಮತ್ತು ಜಗದ್ಗುರು ಶ್ರೀಶಿವರಾತ್ರೀಶ್ವರ ಮಹಾವಿದ್ಯಾಪೀಠ ಮೈಸೂರು ವತಿಯಿಂದ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮತ್ತು ಇತಿಹಾಸವಿಭಾಗ ಜೆಎಸ್ ಎಸ್ ಮಹಿಳಾ ಕಾಲೇಜು ಸಹಯೋಗದಲ್ಲಿ ನಡೆದ ‘ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 22ನಿಮಿಷಗಳ ಕಿರು ಚಿತ್ರವನ್ನು ನೋಡಿದ್ದೇವೆ. ಆಗ ನನಗನಿಸಿದ್ದು ಮೈಸೂರಿನ ಸಂಸ್ಥಾನದವರಾದ ನಾವು ಎಂತಹ ಸೌಭಾಗ್ಯವಂತರು. ಬ್ರಿಟಿಷರ ಆಡಳಿತ ಸೋಂಕುತಗುಲದಂತೆ ನಮ್ಮನ್ನು ಮಕ್ಕಳಂತೆ ಪ್ರೀತಿಸಿದ ಮಹಾರಾಜರ ಆಳ್ವಿಕೆಯಲ್ಲಿ ನಾವು ಇದ್ವಿ ಅನ್ನೋದೆ ನಮ್ಮ ಪೂರ್ವಜರ ಪುಣ್ಯ, ನಮ್ಮ ಹೆಮ್ಮೆ ಎಂದರು.
ಈಗ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಪ್ರಜಾಪ್ರಭುತ್ವದ ಘೋಷವಾಕ್ಯವೇ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ. ಆಗ ರಾಜ್ಯಪ್ರಭುತ್ವದ ಕಾಲ. ಸಂವಿಧಾನವೆಂದರೆ ಜಾಜಾಜ್ಞೆ. ರಾಜಾಜ್ಞೆಯನ್ನು ಯಾರೂ ಮೀರುವಂತಿಲ್ಲ. ಆದರೆ ಮಹಾರಾಜರ ರಾಜಪ್ರಭುತ್ವದಲ್ಲಿ ಜನಪ್ರಿಯತೆ ಇತ್ತು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾಗುವ ನಾವು ಮುಕುಟವಿಲ್ಲದ ಮಹಾರಾಜರಂತೆ ವರ್ತಿಸಲು ಆರಂಭಿಸುತ್ತೇವೆ. ಆದರೆ ಸಿಂಹಾಸನಾರೂಢ ಮಹಾರಾಜರು ಜನಸಾಮಾನ್ಯರ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿದ್ದರು. ಅದನ್ನು ನೋಡಿದಾಗ ಅನಿಸೋದು ಅದು ‘ರಾಜಪ್ರಭುತ್ವದ ಕಾಲದ ಪ್ರಜಾಪ್ರಭುತ್ವ’. ‘ಈಗ ಪ್ರಜಾಪ್ರಭುತ್ವದ ಕಾಲದ ರಾಜಪ್ರಭುತ್ವ’ ಆಗ ವಂಶಪಾರಂಪರ್ಯ ಅಧಿಕಾರ ಇದ್ದರೂ ಕೂಡ ವಂಶದ ಹಿತಾಸಕ್ತಿಗಾಗಿ ಕೆಲಸ ಮಾಡದ ರಾಜಪ್ರಭುತ್ವ. ಈಗ ಪ್ರಜಾಪ್ರಭುತ್ವದ ಒಳಗೇನೇ ವಂಶದ ಹಿತಾಸಕ್ತಿ ಮತ್ತು ವಂಶದ ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಎಂತಹ ವಿಪರ್ಯಾಸ ಎಂದರು.
ನಮಗೆ ಮಾತ್ರ ಅಧಿಕಾರ ಅಂತ ನಾವು ಬಯಸಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಅಧಿಕಾರ ಇರಬೇಕು, ನಾವು ಬಯಸುವ ಸಂಪತ್ತು ಮೂರು ತಲೆ ಮಾರು ಮಾತ್ರವಲ್ಲ, ಮೂವತ್ತು ತಲೆಮಾರಾದರೂ ಅದು ಕರಗಬಾರದೆಂಬ ಅತಿ ಆಲೋಚನೆ ಮಾಡತಕ್ಕ ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದು ಹಾಗಾದರೆ ನಿಜವಾದ ಆಶಯದ ಪ್ರಜಾಪ್ರಭುತ್ವ? ನನಗನಿಸತ್ತೆ ಮೈಸೂರು ಮಹಾರಾಜರು ನೀಡಿದ ಜನಪರ ಅಡಳಿತವೇ ನಿಜವಾದ ಆಶಯದ ಪ್ರಜಾಪ್ರಭುತ್ವ. ರಾಜಪ್ರಭುತ್ವದ ಒಳಗೆ ಜನರ ಹಿತಾಸಕ್ತಿ. ಪ್ರಜಾಪ್ರಭುತ್ವದ ಒಳಗೆ ಕುಟುಂಬದ ಹಿತಾಸಕ್ತಿ. ಪ್ರಜಾಪ್ರಭುತ್ವದೊಳಗಿನ ಕುಟುಂಬದೊಳಗಿನ ಹಿತಾಸಕ್ತಿಗಿಂತ ರಾಜಪ್ರಭುತ್ವದೊಳಗಿನ ಜನರ ಹಿತಾಸಕ್ತಿಯನ್ನೇ ಆಯ್ಕೆಯ ಪ್ರಶ್ನೆಯಾಗಿಟ್ಟರೆ ಜನರ ಆಯ್ಕೆ ರಾಜಪ್ರಭುತ್ವವೇ ಆಗಿರತ್ತೆ ಎಂದರು.
ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದು ಮೈಸೂರು ಸಂಸ್ಥಾನ. ಈಗ ಪೇಟೆಂಟ್ ಬ್ರಾಂಡೆಡ್ ಯುಗ, ಆಗ ಹೇಗಿರಬಹುದೆಂದು ಮೆಲುಕು ಹಾಕಿದಾಗ ಮೈಸೂರು ಮಲ್ಲಿಗೆಯಿಂದ ಮೊದಲ್ಗೊಂಡು ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬ್ರಾಂಡಿಂಗ್ ಮಾಡುವಂತಹ ಮೊದಲ ಆದ್ಯತೆಯಲ್ಲಿದ್ದ ಕಾಲದಲ್ಲಿ ಮಾಡಿದ್ದು ಉತ್ತಮ ರೀತಿಯಲ್ಲಿ ಎನ್ನುವುದು ಹೆಮ್ಮೆಯ ಸಂಗತಿ ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿಕೊಟ್ಟು ಹೋದ ಮೇಲ್ಪಂಕ್ತಿಯನ್ನು ಚಾಚೂತಪ್ಪದೆ ಪಾಲಿಸಿದವರು ಶ್ರೀಜಯಚಾಮರಾಜೇಂದ್ರ ಒಡೆಯರ್. ಅವರು ಸ್ವತಃ ಕವಿಯಾಗಿ, ತತ್ವಜ್ಞಾನಿಯಾಗಿ ಜನಪರ ಆಡಳಿತ ಹೇಗೆ ನೀಡಿದರು ಎಂಬುದನ್ನು ವಿವರಿಸಿದರು. ಸರ್ಕಾರಿ ಬಸ್ ನಲ್ಲಿ ಸೀಟ್ ನಮ್ಮದಲ್ಲದಿದ್ದರೂ ನಮ್ಮ ಪಕ್ಕದ ಸೀಟ್ ಮೇಲೆ ಖರ್ಚಿಪ್ ಇರಿಸಿ ಕಾಯ್ದುಕೊಳ್ಳುತ್ತೇವೆ ಆದರೆ ತಲೆತಲಾಂತರದಿಂದ ಬಂದ, ಹಲವಾರು ವರ್ಷಗಳ ಇತಿಹಾಸವಿರುವ ಒಮದು ಸಿಂಹಾಸನವನ್ನು ದೇಶಕ್ಕೆ ವಿಲೀನಗೊಳಿಸುವ ಸಂಗತಿಯೇ ಸ್ವತಂತ್ರ ಭಾರತಕ್ಕೂ ಮೊದಲೇ ಆಲೋಚನೆ ಮಾಡಿ ಸಹಿ ಹಾಕ್ತಾರೆಂದರೆ ಅವರಲ್ಲಿರೋದು ಎಂತಹ ಉದಾರತೆ ಎಂದು ಬಣ್ಣಿಸಿದರು.
ಕೆಸರಿನಲ್ಲಿದ್ದ ಕಮಲದಂತೆ ಅಂಟಿಯೂ ಅಂಟದಂತೆ ರಾಜಪ್ರಭುತ್ವದ ವ್ಯಾಮೋಹಕ್ಕೆ ಒಳಗಾಗದೇ ಜೀವಿಸಿದನ್ನು ಸೂಚಿಸತ್ತೆ.ಅವರ ಮೇಲಿನ ಗೌರವ ನೂರ್ಮಡಿಯಾಗತ್ತೆ. ಸ್ವತಂತ್ರ ಭಾರತದಲ್ಲಿ ರಾಜಪ್ರಭುತ್ವವವೇ ಇದ್ದಿದ್ದರೆ ನಮ್ಮ ಕರ್ನಾಟಕ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತಿತ್ತೇನೋ ಅಂತ ಕಾಣತ್ತೆ ಎಂದು ಅಭಿಪ್ರಾಯಪಟ್ಟರು. ಇಂದು ಒಂದು ಕಟ್ಟಡ ನೋಡಲು ಹೋಗಿದ್ದೆ. ನಾವಿಂದು ಇಂಜಿನಿಯರ್ ದಿನಾಚರಣೆಯನ್ನು ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಫೋಟೋ ಇಟ್ಟು ಮಾಡುತ್ತೇವೆ. ಅಂತಹ ಮತ್ತೊಬ್ಬ ಇಂಜಿನಿಯರ್ ನಮಗೆ ಸಿಕ್ಕಿಲ್ಲ. ಅವರ ಕಾಲಘಟ್ಟದಲ್ಲಿನ ಕಟ್ಟಡ ಮಸುಕಾಗದೇ ಇನ್ನೂ ಹಾಗೇ ಇದೆ. ಆದರೆ ಅವರ ಫೋಟೋ ಇಟ್ಟು ಇಂಜಿನಿಯರ್ ದಿನ ಆಚರಿಸುವ ನಮ್ಮ ಆಧುನಿಕ ಇಂಜಿನಿಯರ್ ನಿರ್ಮಿಸುವ ಕಟ್ಟಡ ಉದ್ಘಾಟನೆಗೂ ಮುನ್ನವೇ ಉದುರಿ ಹೋಗುವ ಸ್ಥಿತಿಯಲ್ಲಿರತ್ತೆ ಯಾಕೆ ಹೀಗೆ ಈ ಚಿಂತನೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ ಮೇಯರ್ ತಸ್ನೀಂ, ಪರಂಪರೆ ಇಲಾಖೆಯ ಪರಂಪರೆ ವಿಭಾಗದ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English