ಮಡಿಕೇರಿ : ಸರ್ಕಾರಿ ಜಾಗದಲ್ಲಿ ನೆಲೆನಿಂತಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒಕ್ಕಲೆಬ್ಬಿಸುವುದಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿರುವುದಾಗಿ ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಮೊಣ್ಣಪ್ಪ ತಿಳಿಸಿದ್ದಾರೆ.
ಬಹುಜನ ಕಾರ್ಮಿಕರ ಸಂಘ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ವತಿಯಿಂದ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯ ಬಾಳುಗೋಡು ನಿರಾಶ್ರಿತರು ಸೇರಿದಂತೆ ಇತರ ಬಡವರ್ಗದ ಮಂದಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ಈ ಭರವಸೆ ದೊರೆತ್ತಿದೆ ಎಂದು ಮೊಣ್ಣಪ್ಪ ಹೇಳಿದ್ದಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬಡವರನ್ನು ಒಕ್ಕಲೆಬ್ಬಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮತ್ತೊಂದು ಬಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಭೂಮಿ ಮತ್ತು ವಸತಿ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಶೀಘ್ರ ಉನ್ನತ ಮಟ್ಟದ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೇಡಿಕೆಗಳು
ಸರ್ಕಾರಿ ಜಮೀನಿನ ಸಂರಕ್ಷಣೆಯ ಹೆಸರಿನಲ್ಲಿ ಬಡಜನರ ಮೇಲೆ ನಡೆಯುಯುತ್ತಿರುವ ದಬ್ಬಾಳಿಕೆಗೆ ಕೊನೆಗೊಳ್ಳಬೇಕು, ರಾಜ್ಯದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಬಡಜನರು ಹಾಗೂ ಕಾರ್ಮಿಕ ವರ್ಗವನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡಬಾರದು, ಅನಿವಾರ್ಯ ಪರಿಸ್ಥಿತಿಗಳಲ್ಲೂ ಪರ್ಯಾಯ ವ್ಯವಸ್ಥೆ ಮಾಡದೆ ಬಡವರನ್ನು ತೆರವುಗೊಳಿಸಬಾರದು ಎಂದು ಪ್ರಮುಖರು ಒತ್ತಾಯಿಸಿದರು.
ಬಡಜನರಿಗೆ ವಸತಿ ಜಾಗವನ್ನು ಹಾಗೂ ಉಳುಮೆ ಭೂಮಿಯನ್ನು ಮಂಜೂರು ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ಫಾರಂ 50, 53, 57,94,(ಸಿ), 94(ಸಿಸಿ) ಹಾಗೂ ಅರಣ್ಯ ಕಾಯ್ದೆಯಡಿ ಅರ್ಜಿ ಹಾಕಿರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಬಂಧಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು, ಸರ್ಕಾರಿ ಭೂಮಿ ಅಥವಾ ಖಾಸಗೀ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಗೇಣಿ ನೀಡುವುದನ್ನು ನಿಲ್ಲಿಸಬೇಕು, ಸರ್ಕಾರಿ ಜಾಗದಲ್ಲಿ ನೆಲೆ ನಿಂತಿರುವ ನಿರಾಶ್ರತಿರಿಗೆ ಸರ್ವೆ ಕಾರ್ಯ ನಡೆಸಿ ಅದೇ ಜಾಗವನ್ನು ಹಂಚಿಕೆ ಮಾಡಬೇಕು ಎಂದು ನಿಯೋಗ ಮುಖ್ಯಮಂತ್ರಿಗಳ ಗಮನ ಸೆಳೆದಿದೆ.
ಫೆ.18 ರಂದು ದೊರೆಸ್ವಾಮಿ ಭೇಟಿ
ಹಿರಿಯರಾದ ದೊರೆಸ್ವಾಮಿ ಅವರು ಫೆ.18 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಬಾಳುಗೋಡು ನಿರಾಶ್ರಿತರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಿದ್ದಾರೆ, ಅಲ್ಲದೆ ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆ.ಮೊಣ್ಣಪ್ಪ ತಿಳಿಸಿದ್ದಾರೆ.
Click this button or press Ctrl+G to toggle between Kannada and English