ಮುಂಬಯಿ : ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದಲ್ಲಿನ ಸರಕಾರ ಅಸ್ವಾಭಾವಿಕ, ಅವಾಸ್ತವಿಕ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂಬಯಿನಲ್ಲಿ ಪಕ್ಷದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಎನ್‌ಸಿಪಿ- ಶಿವಸೇನೆ ಮೈತ್ರಿ ಕೂಟ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಎಂದು ದೂರಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಥಾನಗಳು ಬಂದಿದ್ದರೂ ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಮುಂಬರುವ ಚುನಾವಣೆಗಾಗಿ ಪಕ್ಷ ಸ್ವಯಂ ಶಕ್ತಿಯಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧಗೊಳ್ಳಬೇಕು. ‘ಬಿಜೆಪಿ ವರ್ಸಸ್ ಎಲ್ಲರೂ’ ಎಂಬಂಥ ಸ್ಪರ್ಧೆಗೆ ಅಣಿಯಾಗಬೇಕು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಹೆಚ್ಚಿನ ಬಹುಮತ ದೊರೆತು, ಸರಕಾರ ರಚಿಸಲಿದೆ ಎಂಬ ವಿಶ್ವಾಸವನ್ನೂ ನಡ್ಡಾ ವ್ಯಕ್ತಪಡಿಸಿದ್ದಾರೆ.
ತಾಕತ್ತಿದ್ದರೆ ಸರಕಾರ ಉರುಳಿಸಿ : ಇದೇ ವೇಳೆ, ಜಲಗಾಂವ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ ‘ತಾಕತ್ತಿದ್ದರೆ ಮಹಾ ಅಘಾಡಿ ಸರಕಾರವನ್ನು ಬಿಜೆಪಿ ಪತನಗೊಳಿಸಲಿ. ಅದಕ್ಕೆ ನಾನು ಬಾಳಾ ಸಾಹೇಬ್ ಠಾಕ್ರೆ ಪುತ್ರ ಸವಾಲು ಹಾಕುತ್ತಿದ್ದೇನೆ’ ಎಂದಿದ್ದಾರೆ. ಶೀಘ್ರದಲ್ಲಿಯೇ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಹಾಗೂ ಆಪರೇಷನ್ ಕಮಲದ ಕುರಿತು ಸುದ್ದಿಯ ಹಿನ್ನೆಲೆಯಲ್ಲಿ ಅವರು ಈ ಸವಾಲು ಹಾಕಿದ್ದಾರೆ.
ಇನ್ನೊಂದೆಡೆ, ಸಿಎಂ ಉದ್ಧವ್ ಠಾಕ್ರೆಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಸವಾಲೊಂದನ್ನು ಹಾಕಿದ್ದಾರೆ. ಮಹಾ ವಿಕಾಸ್ ಅಘಾಡಿಯನ್ನು ಏಕಾಂಗಿಯಾಗಿ ಸೋಲಿಸುವ ಸಾಮರ್ಥ್ಯ ಬಿಜೆಪಿಗಿದೆ. ಧೈರ್ಯವಿದ್ದರೆ, ನೀವು (ಶಿವಸೇನೆ) ಮತ್ತೂಮ್ಮೆ ಚುನಾವಣೆ ಎದುರಿಸಿ ಎಂದು ಗುಡುಗಿದ್ದಾರೆ.
Click this button or press Ctrl+G to toggle between Kannada and English