ಮಂಗಳೂರು :ಮಂಗಳೂರು ಸಿಸಿಬಿ ಪೊಲೀಸರು ದೇಶದ ನಾನಾ ವಿಶ್ವವಿದ್ಯಾನಿಲಯಗಳ ಅಂಕಪಟ್ಟಿ ಹಾಗೂ ಪದವಿ ಸರ್ಟಿಫಿಕೇಟ್‌ಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರತ್ಕಲ್ ಮಾರಿಗುಡಿ ಸಮೀಪದ ಶ್ರೀದೇವಿ ಅಪಾರ್ಟ್‌ಮೆಂಟ್ ನಿವಾಸಿ ಅವಿನಾಶ್ ಶೆಟ್ಟಿ (31) ಹಾಗೂ ಕಾಸರಗೋಡು ಜಿಲ್ಲೆಯ ವಲುಕ್ಕಾಡ್ ಎಲಂಬಾಚಿ ನಿವಾಸಿ ಮೊಹಮ್ಮದ್ ಶಾಹಿದ್ ಎನ್.ಪಿ. ಬಂಧಿತ ಆರೋಪಿಗಳಾಗಿದ್ದಾರೆ.
ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿವಿ, ಚತ್ತಿಸ್‌ಘಡ ವಿವಿ, ಬಿಸ್ಲಾಪುರ್ ಡಾ.ಸಿ.ವಿ.ರಾಮನ್ ವಿವಿ, ಕರ್ನಾಟಕದ ಎಸ್ಸೆಸ್ಸೆಲ್ಸಿ ಬೋರ್ಡ್, ಮೀರತ್‌ನ ಚೌದರಿ ಚರಣಸಿಂಹ ವಿವಿ, ಉತ್ತರ ಪ್ರದೇಶದ ಭಾರತೀಯ ಶಿಕ್ಷಾ ಪರಿಷದ್, ಸಿಕ್ಕಿಂನ ಜಾಮೀಯ ಮುಲ್ಲವಾರ್ಸಿಟಿ, ಮೀರತ್‌ನ ಸಿಎಚ್ ಚರಣಸಿಂಗ್ ವಿವಿ, ಮೀರತ್‌ನ ಸೆಂಟ್ರಲ್ ಬೋರ್ಡ್ ಓಪನ್ ಸ್ಕೂಲ್ ಎಜುಕೇಶನ್, ಹೊಸದಿಲ್ಲಿಯ ವಿನಾಯಕ ಮಿಷನ್ ವಿವಿ, ತ್ರಿವೆಂಡ್ರಂ ಎಸ್‌ಟಿಇಡಿ ಕೌನ್ಸಿಲ್, ಉತ್ತರ ಪ್ರದೇಶದ ಇಐಐಎಲ್‌ಎಂ ವಿವಿ, ಉತ್ತರ ಪ್ರದೇಶದ ಸಿಎಂಜೆ ವಿವಿ ಮುಂತಾದ ಮಾನ್ಯತೆಯನ್ನು ಪಡೆದ ಸಂಸ್ಥೆಯೆಂದು ಹೇಳಿ ವಿದ್ಯಾರ್ಥಿಗಳನ್ನು ನಂಬಿಸಿ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಮಂಗಳೂರು ಕಮಿಷನರ್ ಮನೀಷ್ ಕರ್ಬಿಕರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಮಂಗಳೂರಿನ ಬೆಂದೂರುವೆಲ್‌ನಲ್ಲಿರುವ ಸಿಟಿ ಆರ್ಕೇಡ್‌ನಲ್ಲಿ ಡ್ರೀಮ್ ಕ್ಯಾರಿಯರ್ ಮತ್ತು ಎಂಜಿ ರಸ್ತೆಯ ಕೃಷ್ಣಾ ಕಾಂಪ್ಲೆಕ್ಸ್‌ನಲ್ಲಿ ನವಭಾರತ ಎಜುಕೇಷನ್ ರೀಸರ್ಚ್ ಪೌಂಡೇಶನ್ ಎಂಬ ಹೆಸರಿನಲ್ಲಿ ಸಂಸ್ಥೆಗಳನ್ನು ನಡೆಸುತ್ತಿದ್ದು, ಕಳೆದ ಸುಮಾರು 10 ವರ್ಷಗಳಿಂದ ಈ ಸಂಸ್ಥೆಗಳು ನಡೆಯುತ್ತಿದೆ ಎಂದು ತಿಳಿದು ಬಂದಿವೆ. ಆರೋಪಿ ಮೊಹಮದ್ ಶಾಹಿದ್ ಕಲಿತದ್ದು, ಕೇವಲ 7ನೇ ತರಗತಿಯಾದರೂ ಇಂಗ್ಲಿಷ್ ನಿರರ್ಗಳವಾಗಿ ಮಾತನಾಡುತ್ತಾನೆ. ಕನ್ನಡ ಬರುವುದಿಲ್ಲ. ಆರೋಪಿ ಅವಿನಾಶ್ ಶೆಟ್ಟಿ ಎಂ.ಬಿ.ಎ. ಓದಿದ್ದು, ಈತ ಕನ್ನಡ ಚಲನಚಿತ್ರವೊಂದರಲ್ಲಿ ಸಹ ನಟನಾಗಿ ಅಭಿನಯಿಸುತ್ತಿದ್ದಾನೆ.
ಅಭ್ಯರ್ಥಿಗಳಿಂದ 30 ಸಾವಿರ ರೂ.ಗಳಿಂದ 95 ಸಾವಿರ ರೂಪಾಯಿಗಳ ವರೆಗೆ ಅಂಕಪಟ್ಟಿಗಾಗಿ ಹಣವನ್ನು ವಸೂಲಿ ಮಾಡಿ 30 ದಿನಗ ಒಳಗಾಗಿ ಅವರಿಗೆ ಅಂಕಪಟ್ಟಿಯನ್ನು ನೀಡಲಾಗುತ್ತಿತ್ತು. ಇದರಲ್ಲಿ ನಕಲಿ ಅಂಕಪಟ್ಟಿಗಳು, ನಕಲಿ ಮೈಗ್ರೇಷನ್ ಸರ್ಟಿಫಿಕೇಟ್‌ಗಳು, ಪದವಿ ಸರ್ಟಿಫಿಕೇಟ್‌ಗಳನ್ನು ನಕಲಿ ಮಾಡಿ ನೀಡಲಾಗುತ್ತಿತ್ತು ಎಂದು ಅವರು ತಿಳಿಸಿದರು.
ಡಿಪ್ಲೋಮ ಮೂರು ವರ್ಷಕ್ಕೆ 40 ಸಾವಿರ ರೂ., ಡಿಗ್ರಿ ಮೂರು ವರ್ಷಕ್ಕೆ 45ಸಾವಿರ ರೂ., ಎಂಬಿಎ 50 ಸಾವಿರ ರೂ., ಬಿಟೆಕ್ 60 ಸಾವಿರ ರೂ., ಬಿಕಾಂ, ಬಿಎಸ್ಸಿ- 75 ಸಾವಿರ ರೂ., ಬಿಬಿಎನ್, ಬಿಬಿಎ, ಬಿಸಿಎ ಕೋರ್ಸ್‌ಗೆ 80ಸಾವಿರ ರೂ., ಎಂಬಿಎ 1.20 ಲಕ್ಷ ರೂ., ಎಂಕಾಂ, ಎಎಸ್ಸಿ ಇತರ ಪಿಜಿಗಳಿಗೆ 90ಸಾವಿರ ರೂ., ದಿಲ್ಲಿ ಪಿಯುಸಿ ಬೋರ್ಡ್‌ನ ಪಿಯುಸಿ ಮಾರ್ಕ್ ಕಾರ್ಡ್‌ಗಳಿಗೆ 80ಸಾವಿರ ರೂ., ಎಸ್ಸೆಸ್ಸೆಲ್ಸಿ ಮಾರ್ಕ್ ಕಾರ್ಡ್‌ಗೆ 60ಸಾವಿರ ರೂ. ಪಡೆಯುತ್ತಿದ್ದರು.
ನಾನಾ ವಿಶ್ವವಿದ್ಯಾನಿಲಯಗಳ ಮಾರ್ಕ್ಸ್ ಕಾರ್ಡ್ ಹಾಗೂ ಸರ್ಟಿಫಿಕೇಟ್‌ಗಳನ್ನು ಸ್ಕ್ಯಾನ್ ಮಾಡಿ ಹಾಗೂ ಕೆಲವನ್ನು ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಂಡು ಅದರಂತೆಯೇ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಅಭ್ಯರ್ಥಿಗಳ ಹೆಸರನ್ನು ಭರ್ತಿ ಮಾಡಿ ನೀಡಲಾಗುತ್ತಿತ್ತು ಎಂದು ಕಮಿಷನರ್ ತಿಳಿಸಿದರು.
ಆರೋಪಿಗಳಿಂದ ವಶಪಡಿಸಿಕೊಂಡ ಕಂಪ್ಯೂಟರ್‌ಗಳಲ್ಲಿ ಹೆಸರನ್ನು ಬರೆಯದ ವಿವಿಧ ವಿಶ್ವವಿದ್ಯಾಲಯಗಳ ಸರ್ಟಿಫಿಕೇಟ್ ಹಾಗೂ ಅಂಕಪಟ್ಟಿಗಳು ಇರುವುದು ಕಂಡುಬಂದಿದೆ ಎಂದು ಕಮಿಶನರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಮುತ್ತುರಾಯ, ಡಿ.ಧರ್ಮಾಯ್ಯ ಹಾಗೂ ಸಿಸಿಬಿ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English