ಬೆಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ಪಕ್ಕದಲ್ಲಿ ಕುಳಿತು ಉದ್ದೇಶಪೂರ್ವಕವಾಗಿ ಆಕೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಿರ್ವಾಹಕನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಸುಬು ಆಲಿ ತಲ್ಲೂರ ಬಂಧಿತ ನಿರ್ವಾಹಕ. ಬೆಂಗಳೂರು- ಪುತ್ತೂರು ಬಸ್‌ನಲ್ಲಿ ಫೆ. 15ರಂದು ಘಟನೆ ನಡೆದಿದೆ. ನಿರ್ವಾಹಕ ತನ್ನ ಪಕ್ಕದಲ್ಲಿ ಕುಳಿತು ಕಿರುಕುಳ ನೀಡುತ್ತಿರುವುದನ್ನು ಸಂತ್ರಸ್ತ ಯುವತಿ ವಿಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ನೀಡಿದ್ದಾರೆ.
ಫೆ. 15ರಂದು ಯುವತಿ ಗೋವರ್ಧನ್ ಚಿತ್ರಮಂದಿರ ಸ್ಟಾಪ್‌ನಲ್ಲಿ ಬಸ್ ಹತ್ತಿ ಹಾಸನಕ್ಕೆ ಹೊರಟಿದ್ದರು. ಈ ವೇಳೆ ಯುವತಿಯ ಪಕ್ಕದಲ್ಲೇ ಕುಳಿತಿದ್ದ ನಿರ್ವಾಹಕ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಯುವತಿ ಪ್ರತಿರೋಧ ತೋರಿದ್ದಕ್ಕೆ ‘ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನ ಮರ್ಯಾದೆಯೇ ಹೋಗುವುದು’ ಎಂದಿದ್ದಾನೆ.
ಕಿರುಕುಳದಿಂದ ಬೇಸತ್ತ ಯುವತಿ, ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಊರಿಗೆ ತೆರಳಿ ತನ್ನ ಪಾಲಕರಿಗೆ ತಿಳಿಸಿದ್ದಾರೆ. ವಿಡಿಯೋ ನೋಡಿ ಕೋಪಗೊಂಡ ಯುವತಿಯ ಕಡೆಯವರು, ಬಸ್ ನಿರ್ವಾಹಕನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು ಗೋವರ್ಧನ ಚಿತ್ರಮಂದಿರದ ಬಳಿ ಬಂದಿದ್ದಾರೆ. ಬಸ್ ಬರುತ್ತಿದ್ದಂತೆ ನಿರ್ವಾಹಕನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ದೂರು ಆಧರಿಸಿ ಆರೋಪಿ ನಿರ್ವಾಹಕನನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ಕಡೆಯವರು ಎನ್ನಲಾದವರು ಹಲ್ಲೆ ಮಾಡಿದ ಕಾರಣ ಆರೋಪಿ ಮುಖಕ್ಕೆ ಗಾಯವಾಗಿದೆ. ಈ ಸಂಬಂಧ ನಿರ್ವಾಹಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸುಬ್ರಮಣ್ಯನಗರ ಪೊಲೀಸರು ತಿಳಿಸಿದರು.
ಈ ನಡುವೆ, ಕಿರುಕುಳ ನೀಡಿದ ಕಂಡಕ್ಟರ್ ವಿರುದ್ಧ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಇಂತಹ ನಿರ್ವಾಹಕರಿಂದ ಇಡೀ ನಿಗಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಜಾಲತಾಣಗಳಲ್ಲಿ ಸಾರ್ವಜನಿಕರು ವಿಡಿಯೋ ಅಪ್‌ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ನಿರ್ವಾಹಕ ಇಸುಬು ಆಲಿಯನ್ನು ಕೆಎಸ್‌ಆರ್‌ಟಿಸಿ ಅಮಾನತು ಮಾಡಿದೆ. ಸಂಸ್ಥೆಯ ಶಿಸ್ತು, ನಡತೆ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸಂಸ್ಥೆಯ ಗೌರವಕ್ಕೆ ಆರೋಪಿತ ನಿರ್ವಾಹಕ ಧಕ್ಕೆ ತಂದಿದ್ದಾನೆ. ಈ ಸಂಬಂಧ ಭದ್ರತಾ ಮತ್ತು ಜಾಗೃತಾಧಿಕಾರಿ ಫೆ. 17ರಂದು ವರದಿ ನೀಡಿದ್ದರು. ವರದಿ ಆಧರಿಸಿ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
Click this button or press Ctrl+G to toggle between Kannada and English