ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಸುನಿಲ್‌ ಕುಮಾರ್‌ ಗೆ ಚಿನ್ನ

12:03 PM, Wednesday, February 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sunil-kumar

ನವದೆಹಲಿ : ಭಾರತದ ಸುನಿಲ್‌ ಕುಮಾರ್‌ ಅವರು ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕಳೆದ 27 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ.

87 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಅವರು ಕಿರ್ಗಿಸ್ಥಾನದ ಅಜತ್‌ ಸಲಿದಿನೋವ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್‌ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. 2019ರಲ್ಲಿ ನಡೆದ ಕೂಟದಲ್ಲಿ ಫೈನಲಿಗೇರಿದ್ದ ಅವರು ಅಂತಿಮ ಸೆಣಸಾಟದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.

ಸೆಮಿಫೈನಲ್‌ ಹೋರಾಟದಲ್ಲಿ ಸುನಿಲ್‌ ಕಠಿನ ಹೋರಾಟ ಎದುರಿಸಿದ್ದರು. ಕಜಾಕ್‌ಸ್ಥಾನದ ಅಜಾಮತ್‌ ಕುಸ್ತುಬಯೇವ್‌ ಪ್ರಬಲ ಸವಾಲು ನೀಡಿದ್ದರು. ಒಂದು ಹಂತದಲ್ಲಿ ಸುನಿಲ್‌ 1-8 ಅಂಕಗಳಿಂದ ಹಿನ್ನೆಡೆಯಲ್ಲಿದ್ದರು. ಆದರೆ ಆಬಳಿಕ ಪ್ರಚಂಡ ನಿರ್ವಹಣೆ ನೀಡಿದ ಅವರು ಸತತ 11 ಅಂಕಗಳನ್ನು ಗೆಲ್ಲುತ್ತ 12-8ರಿಂದ ಕುಸ್ತುಬಯೇವ್‌ ಅವರನ್ನು ನೆಲಕ್ಕುರುಳಿಸಿ ಫೈನಲಿಗೇರಿದ್ದರು.

ಭಾರತದ ಇನ್ನೋರ್ವ ಕುಸ್ತಿಪಟು ಅರ್ಜುನ್‌ ಹಲಕುರ್ಕಿ ಅವರು 55 ಕೆ.ಜಿ. ಗ್ರಿಕೊ-ರೋಮನ್‌ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಇರಾನ್‌ನ ನಾಸೆರ್‌ಪೌರ್‌ ವಿರುದ್ಧ 7-1 ಮುನ್ನಡೆಯಲ್ಲಿದ್ದರೂ ಅಂತಿಮವಾಗಿ 7-8 ಅಂಕಗಳಿಂದ ಶರಣಾಗಿದ್ದರು.

ಕೊರೊನಾ ವೈರಸ್‌ನ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಜಪಾನ್‌, ಕೊರಿಯ ಮತ್ತು ಚೈನೀಸ್‌ ತೈಪೆಯ ಕೆಲವು ಕುಸ್ತಿತಾರೆಯರು ಮಾಸ್ಕ್ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English