ಬೆಂಗಳೂರು : ಯಡಿಯೂರಪ್ಪ ಮೂರು ವರ್ಷಗಳು ಅಧಿಕಾರ ನಡೆಸಲಿ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾರೈಸಿದ್ದಾರೆ.
ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ರಚನೆಯಾಗಿರುವ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಮೂರು ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸಲಿ ಎಂಬುದು ನಮ್ಮ ಹಾರೈಕೆ. ಇದರಿಂದ ನಮಗೆ ಪಕ್ಷ ಕಟ್ಟಲು ಅವಕಾಶ ಸಿಗುತ್ತದೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಪತನದ ಬಳಿಕ ಜಿಟಿಡಿ ಅವರು ಯಡಿಯೂರಪ್ಪ ಮನೆಗೆ ಹೋಗಿದ್ದಾರೆ. ಕ್ಷೇತ್ರದ ಕೆಲಸ ಮಾಡಲು ಉಪಮುಖ್ಯಮಂತ್ರಿಗಳ ನೆರವು ಬೇಕೆಂದಿದ್ದಾರೆ. ಅವರು ಕಾಂಗ್ರೆಸ್ಗೆ ಹೋಗುತ್ತಾರೋ, ಬಿಜೆಪಿ ಹೋಗುತ್ತಾರೋ ಗೊತ್ತಿಲ್ಲ. ಜಿ.ಟಿ. ದೇವೇಗೌಡ ಈ ಹಿಂದೆಯೇ ಪಕ್ಷ ಬಿಟ್ಟು ಹೋಗಿದ್ದರು ಎಂದು ಹೇಳಿದರು.
ಅವರ ಸರ್ಕಾರ ಅವಧಿ ಮುಗಿಯುವುದರೊಳಗೆ ನಮ್ಮ ಪಕ್ಷವನ್ನು ಬಲಗೊಳಿಸುವ ಕಾರ್ಯ ಮಾಡುತ್ತೇವೆ. ಯಡಿಯೂರಪ್ಪ ಸರ್ಕಾರ ಪತನವಾಗಲಿ ಎಂದು ನಾನು ಹೇಳುವುದಿಲ್ಲ. ಮೂರು ವರ್ಷ ಅವರು ಒಳ್ಳೆಯ ಕೆಲಸ ಮಾಡಲಿ ಎಂದಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮತದಾನ ಮಾಡದೇ ಇರಲು ತೀರ್ಮಾನಿಸಿದ್ದರೂ ಜಿಟಿ ದೇವೇಗೌಡ ಮತದಾನ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಯಾರಿಗೂ ಕೂಡ ವಿಪ್ ಜಾರಿ ಮಾಡಿರಲಿಲ್ಲ. ವಿಪ್ ಹೊರಡಿಸಿ ಯಾರನ್ನೂ ಕಟ್ಟಿರಲಿಲ್ಲ. ಹೀಗಾಗಿ ಮತದಾನ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಎಸ್ವೈ ನೀಡಿದ ಮಾತಿನಂತೆ ಮಂತ್ರಿ ಮಂಡಲ ರಚಿಸಿದ್ದಾರೆ ಅಷ್ಟೇ ಎಂದರು.
ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಭ್ರಷ್ಟಾಚಾರ ಇದೆ ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಹೇಗೆ ಇತ್ಯರ್ಥಪಡಿಸುತ್ತಾರೆ ನೋಡೋಣ. ವಿಧಾನಸಭೆಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ. ಈ ಬಗ್ಗೆ ಶ್ವೇತ ಪತ್ರ ಬಿಡುಗಡೆ ಅವಶ್ಯಕತೆ ಇಲ್ಲ ಎಂದರು.
Click this button or press Ctrl+G to toggle between Kannada and English