ನಾಡಿನ ಪ್ರಗತಿಗೆ ಕರಾವಳಿಗರ ಕೊಡುಗೆ ಅಪಾರ : ನಳಿನ್ ಕುಮಾರ್ ಕಟೀಲ್

9:33 AM, Friday, February 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

nalin

ಮಂಗಳೂರು : ಕರಾವಳಿಗರು ನಾಡಿನ ಪ್ರಗತಿಗೆ ವಿಶಿಷ್ಟ ಕೊಡುಗೆ ನೀಡಿ ಜಗದ್ವಿಖ್ಯಾತರಾಗಿದ್ದಾರೆ ಎಂದು ಲೋಕಸಭಾಸದಸ್ಯರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಕಲಬುರಗಿಯ ದಕ್ಷಿಣ ಕನ್ನಡ ಸಂಘ (ರಿ) ಮತ್ತು ಹೋಟೆಲ್ ಮಾಲಿಕರ ಸಂಘದ, ವತಿಯಿಂದ ಫೆ. 19 ರಂದು ನಗರದ ಆಮಂತ್ರಣ ಹೋಟೆಲಿನ ’ಅನ್ನಪೂರ್ಣ ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕರಾವಳಿಯ ದೈವ ದೇಗುಲಗಳ ಅಭಿವೃದ್ಧಿ ಸಹಿತ ಧಾರ್ಮಿಕ ಕ್ಷೇತ್ರ, ಶಿಕ್ಷಣಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಿಗೆ ಪರವೂರಿನಲ್ಲಿ ದುಡಿಯುವ ಕೈಗಳ ಅಪಾರ ಕೊಡುಗೆ ಇದೆ. ಕೇವಲ ಕರಾವಳಿಗಳಷ್ಟೆ ಅಲ್ಲ, ಅವರ ಕರ್ಮ ಭೂಮಿಯಲ್ಲಿ ಸಾಮಾಜಿಕ ಸೇವೆಗೆ ಬದ್ಧತೆ ತೋರಿ ಪ್ರಗತಿಗೆ ಕೈಜೋಡಿಸುತ್ತಿದ್ದಾರೆ. 55 ವರ್ಷಗಳಿಂದ ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಸೇವೆ ಈ ಭಾಗದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಜಗತ್ತಿನಲ್ಲಿ ಎಲ್ಲೆ ಹೋದರೂ ಕರಾವಳಿಗರು ಪ್ರೀತಿ-ವಿಶ್ವಾಸದಿಂದ ಬಾಳ್ವೆ ಮಾಡುತ್ತಿದ್ದಾರೆ. ಕಲಬುರಗಿಯಲ್ಲೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕರಾವಳಿಗರ ಸಮಸ್ಯೆಗೆ ಸ್ಪಂದಿಸಿ ಸಹಕರಿಸಿ ಎಂದು ಕರೆನೀಡಿದರು. ಕರಾವಳಿಗರ ಈ ಸನ್ಮಾನ ನನ್ನ ತವರುಮನೆಗೆ ಬಂದ ಅನುಭವ ಮತ್ತು ಖುಷಿ ನೀಡಿದೆ. ಆತಿಥ್ಯಕ್ಕೆ ಧನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘವು ಇನ್ನಷ್ಟು ಸಮಾಜ ಮುಖಿ ಕಾರ್ಯ ಮುಂದುವರಿಸಲಿ ಮತ್ತು ಎಲ್ಲ ರೀತಿಯ ಬೆಂಬಲ ಖಚಿತ ಎಂದು ಹೇಳಿದರು.

nalin

ಮಂಗಳೂರು – ಕಲಬುರಗಿ ಸಂಪರ್ಕ ಮನವಿ :
ಕಲಬುರಗಿಯಿಂದ ಮಂಗಳೂರಿಗೆ ತೆರಳಲು ಕೇವಲ ಬಸ್ ವ್ಯವಸ್ಥೆ ಮಾತ್ರ ಸದ್ಯ ಇದ್ದು ಬೀದರ್-ಕಲಬುರಗಿ-ಯಾದಗಿರಿ-ರಾಯಚೂರು-ಗುಂತಕಲ್,-ಬಳ್ಳಾರಿ-ಹೊಸಪೇಟೆ ಚಿಕ್ಕಜಾಜೂರು- ಹಾಸನ-ಸಕಲೇಶಪುರ ದಾರಿಯಾಗಿ ರೈಲು, ಹಾಗೂ ಕಲಬುರಗಿ ವಿಮಾನ ನಿಲ್ದಾಣದಿಂದ ’ಉಡಾನ್’ ಯೋಜನೆಯಡಿ ಮಂಗಳೂರಿಗೆ ವಿಮಾನ ಸಂಪರ್ಕ ಮತ್ತು ಸಂಘದ ನಿವೇಶನದಲ್ಲಿ ಸಮುದಾಯ ಭವನ ನಿರ‍್ಮಾಣಕ್ಕೆ 5 ಕೋಟಿ ರೂ.ಗಳ ನೆರವು ನೀಡುವಂತೆ ಕೋರಿ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ನರಸಿಂಹ ಮೆಂಡನ್, ಪ್ರವೀಣ್ ಜತ್ತನ್ ಮತ್ತು ಅರುಣಾಚಲಭಟ್ ಮನವಿ ಸಲ್ಲಿಸಿದರು. ಅಧ್ಯಕ್ಷರಾದ ಮೇಲೆ ಸಂಘಕ್ಕೆ ಮೊದಲ ಬಾರಿಗೆ ಆಗಮಿಸಿದ ನಳಿನ್ ಅವರಿಗೆ ಶಾಲು ಹಾರ, ಯಕ್ಷಗಾನ ಕಿರೀಟ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸಭೆಯಲ್ಲಿ ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ, ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಘಟಕ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಉಪಸ್ಥಿತರಿದ್ದರು. ದ.ಕ.ಸಂಘದ ಸದಸ್ಯರು ಹೋಟೆಲ್ ಮಾಲಿಕರ ಸಂಘದ ಸದಸ್ಯರು ಮತ್ತು ನಗರದ ವಾಣಿಜ್ಯೋದ್ಯಮಿಗಳು ಹಾಜರಿದ್ದರು.

ಹೋಟೆಲ್ ಮಾಲಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೆಂಡನ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅರುಣಾಚಲಭಟ್ ಮನವಿ ವಾಚಿಸಿದರು. ಡಾ.ಸದನಂದ ಪೆರ್ಲ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ ಅಧ್ಯಕ್ಷತೆ ವಹಿಸಿದ್ದರು.

nalin

ನಳಿನ್ ಉವಾಚ: ರಾಮಾಯಣದಲ್ಲಿ ವಿಭೀಷಣ ಮೊದಲ ಪಕ್ಷಾಂತರಿ. ರಾಮ-ರಾವಣ ಯುದ್ಧ ಸಂದರ್ಭದಲ್ಲಿ ರಾವಣ ಪಕ್ಷ ಬಿಟ್ಟು ರಾಮಭಕ್ತಿಗೆ ಮೆಚ್ಚಿ ಪಕ್ಷಾಂತರ ಮಾಡಿದ ಇತಿಹಾಸ ಜನಜನಿತ. ಯುದ್ಧಾನಂತರ ವಿಭೀಷಣನಿಗೆ ರಾಷ್ಟ್ರ ಒಪ್ಪಿಸಿ ಜನನೀ ಜನ್ಮಭೂಮಿಶ್ಚ ಸ್ವರ್ಗದಾಪೀಗರಿಯಸಿ’ ಎಂಬಂತೆ ಹೆತ್ತ ತಾಯಿ ಮತ್ತು ಹೆತ್ತ ಭೂಮಿಗೆ ಗೌರವ ಕೊಟ್ಟು ಶ್ರಿ ರಾಮ ಮತ್ತು ಇಡೀ ತಂಡ ಅಯೋಧ್ಯೆಗೆ ಮರಳಿತು. ಹಾಗೆ ಕರಾವಳಿಗರು ಎಲ್ಲಿದ್ದರೂ ಮತ್ತೆ ತಾಯ್ನಾಡಿಗೆ ಕೊಡುಗೆ ನೀಡಿ ಹೆತ್ತಭೂಮಿಯ ಪ್ರೇಮ ಇಟ್ಟುಕೊಂಡಿರುತ್ತಾರೆ ಎಂದರು.

ಕರಾವಳಿಗರಿಗೆ ಪ್ರಾಣಿ ಪ್ರೀತಿ ಇಷ್ಟ! ಕರಾವಳಿಯಲ್ಲಿ ಜನರು ಕೋಣವನ್ನು ಪ್ರೀತಿಸುತ್ತಾರೆ. ಮಗುವಿನಂತೆ ಲಾಲನೆ ಪಾಲನೆ ಮಾಡಿ ಸಾಕಿ ಕಂಬಳದಂತಹ ಓಟದಲ್ಲಿ ಪಾಲು ಪಡೆಯುವಂತೆ ಮಾಡಿದ ಹೆಗ್ಗಳಿಕೆ ಕರಾವಳಿಗರದು. ಪ್ರಾಣಿ ಪ್ರೀತಿ ಅಷ್ಟಿದೆ ಎಂದು ಶ್ಲಾಘಿಸಿದರು.

ಮನೆ ಆತಿಥ್ಯ! ಎಲ್ಲ ಕಡೆ ಭರ್ಜರಿ ಸನ್ಮಾನ, ಸತ್ಕಾರಗಳು ಆಗುತ್ತ್ತಿವೆ, ಆದರೆ ಹೊರಗೆ ಬಂದಾಗ ನಮ್ಮ ಊರಿನವರ ಸನ್ಮಾನ ಸ್ವೀಕರಿಸುವಾಗ ಮನೆಗೆ ಬಂದ ಆತಿಥ್ಯದ ಅನುಭವ ಮತ್ತು ಖುಷಿಯಾಗುತ್ತಿದೆ. ಕರಾವಳಿಗರು ಕೇವಲ ನಮ್ಮನ್ನಲ್ಲ ಎಲ್ಲರನ್ನೂ ಅದೇ ಮನೋಧರ್ಮದಿಂದ ಪ್ರೀತಿಸುತ್ತಾರೆ. ಜಗತ್ತಿನಾದ್ಯಂತ ಕರಾವಳಿಗರು ಹೀಗೆ ಇಂದು ಮನವಿ ನೀಡಿದಾಗಲೂ ಈ ಊರಿಗಾಗಿ ಸ್ಪಂದಿಸಿರುವುದು ಅಭಿನಂದನೀಯ ಎಂದರು.

ಗಂಜಿ ಉಣ್ಣುವವನಿಗೆ ತೂಕದ ಮನವಿ ನಾನು ಗಂಜಿ ಚಟ್ನಿ ಊಟ ಪ್ರಿಯ. ಸಿಂಪಲ್ ಊಟ. ಆದರೂ ನನಗೆ ತೂಕದ ಮನವಿ ನೀಡಿದ್ದಾರೆ. ಬೀದರ್ – ಮಂಗಳೂರು ರೈಲು, ಉಡಾನ್ ವಿಮಾನ ಹೀಗೆ ನಾನು ಪರಿಮಿತಿಯಲ್ಲಿ ಬೇಡಿಕೆಗೆ ಪ್ರಾಮಾಣಿಕ ಸ್ಪಂದನೆ ನೀಡುತ್ತೇನೆ.

ಸಂಸತ್‌ನಲ್ಲಿ ಮಧ್ಯೆ ಕುಳಿತವ ನಾನು ! ಸಂಸತ್‌ನಲ್ಲಿ ನನ್ನ ಹಿಂದೆ ಮುಂದೆ ಕೂತ ಮಹನೀಯರು ಪ್ರಮುಖರು. ಬಲಕ್ಕೆ ಸಿಂಹ (ಪ್ರತಾಪ ಸಿಂಹ) ಎಡಕ್ಕೆ ಕರಡಿ ( ಸಂಗಣ್ಣ ಕರಡಿ) ಹಿಂದೆ ಭಗವಂತ (ಭಗವಂತ ಖುಬಾ) ಎಂದು ಚಟಾಕಿ ಹಾರಿಸಿ ಮಾತನಾಡಿ ನಾನು ’ಸೇಫ್’ ಇದ್ದೇನೆ ಎಂದು ನಗೆಯಾಡಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English