ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ : ಶಿವನಾಮ ಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆ

10:18 AM, Saturday, February 22nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shivaratri

ಉಜಿರೆ : ಮೊದಲು ನಮ್ಮನ್ನು ನಾವು ಅರಿತುಕೊಂಡು, ಮನ-ವಚನ-ಕಾಯದಿಂದ ಪರಿಶುದ್ಧರಾಗಿ, ದೃಢಭಕ್ತಿ ಮತ್ತು ಅಚಲ ವಿಶ್ವಾಸದಿಂದ ದೇವರ ನಾಮಸ್ಮರಣೆ ಮಾಡಿ ಸಾರ್ಥಕ ಜೀವನ ನಡೆಸಬೇಕು. ಆಚಾರವೇ ಶ್ರೇಷ್ಠವಾದ ಧರ್ಮ, ಅಭಯದಾನವೇ ಶ್ರೇಷ್ಠವಾದ ದಾನವಾಗಿದೆ. ಧರ್ಮಸ್ಥಳವು ಜಾತಿ – ಮತ ಬೇಧವಿಲ್ಲದೆ ಸಕಲ ಭಕ್ತರಿಗೂ ಎಂದೂ ಭಯಪಡಬೇಡಿ ಎಂದು ಸದಾ ಅಭಯದಾನ ನೀಡುವ ಪವಿತ್ರ ಕ್ಷೇತ್ರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ನಡೆಯುವ ಶಿವನಾಮ ಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಿ ನಂದಾದೀಪ ಬೆಳಗಿಸಿ ಶುಭ ಹಾರೈಸಿ ಮಾತನಾಡಿದರು.

shivaratri

ಎಲ್ಲರೂ ಅಂತರಂಗ ದರ್ಶನ ಮಾಡಿಕೊಂಡು ಸಂಯಮದಿಂದ ಹಂಸಕ್ಷೀರ ನ್ಯಾಯದಂತೆ ಸದಾ ಸತ್ಕಾರ್ಯಗಳನ್ನು ಮಾಡಿ ಪುಣ್ಯ ಸಂಚಯ ಮಾಡಬೇಕು. ಕೆಟ್ಟ ಕೆಲಸಗಳಿಂದ ಪಾಪಬಂಧವಾದರೆ, ಸತ್ಕಾರ್ಯಗಳಿಂದ ಪುಣ್ಯ ಸಂಚಯವಾಗುತ್ತದೆ. ಎಲ್ಲರೂ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಹಾದಿಯಲ್ಲಿ ನಡೆದಾಗ ಎಲ್ಲೆಲ್ಲೂ ಶಾಂತಿ, ನೆಮ್ಮದಿಯಿಂದ ಲೋಕ ಕಲ್ಯಾಣವಾಗುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ ನಡೆ-ನುಡಿ, ವ್ಯವಹಾರವನ್ನು ಧರ್ಮದ ನೆಲೆಯಲ್ಲಿ ಮಾಡಬೇಕು. ಮಾತೇ ಮಾಣಿಕ್ಯವಾಗಬೇಕು. ಆದುದರಿಂದಲೇ ಮಾತು ಬಿಡ ಮಂಜುನಾಥ ಎಂಬ ಮಾತು ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ ಪ್ರಚಲಿತವಿದೆ. ಆದುದರಿಂದಲೇ ಇಲ್ಲಿ ವಾಕ್‌ದೋಷ ಪರಿಹಾರ, ವಾಕ್‌ತಿರ್ಮಾನ, ಆಣೆಮಾತು ತೀರ್ಮಾನ ಮೊದಲಾದ ಪರಿಹಾರ ವಿಧಾನಗಳಿವೆ. ಭಕ್ತರ ದೋಷಗಳನ್ನೆಲ್ಲ ದೇವರಿಗೆ ಅರ್ಪಿಸಿ ತಮ್ಮ ತಪ್ಪನ್ನು ಅರಿತು, ತಿದ್ದಿಕೊಂಡು ನವ ಜೀವನ ನಡೆಸುವ ಸದವಕಾಶವನ್ನು ಅಭಯದಾನದ ಮೂಲಕ ನೀಡಲಾಗುತ್ತದೆ.

ಆಹಾರ, ನಿದ್ರೆ ಮತ್ತು ಭಯ – ಎಲ್ಲಾ ಪ್ರಾಣಿಗಳಿಗೂ ಸಹಜ ಕ್ರಿಯೆಯಾದರೂ ವಿವೇಕ ಶೀಲರಾದ ಮನುಷ್ಯರು ಎಲ್ಲಾ ವ್ಯವಹಾರಗಳನ್ನು ಸತ್ಯ, ಧರ್ಮ ಮತ್ತು ನ್ಯಾಯದ ನೆಲೆಯಲ್ಲಿ ಮಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

shivaratri

ಶ್ರೀ ಮಂಜುನಾಥ ಸ್ವಾಮಿಗೆ ಸಾಮೂಹಿಕ ನಮನಗಳನ್ನು ಸಮರ್ಪಿಸಿ, ಓಂಕಾರ, ಮೂರು ಬಾರಿ ಶಂಖನಾದ ಹಾಗೂ ಹತ್ತು ನಿಮಿಷ ಎಲ್ಲೂ ಸಾಮೂಹಿಕ ಮೌನಧ್ಯಾನ ಮಾಡಿದ ಬಳಿಕ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಶಿವ ಪಂಚಾಕ್ಷರಿ ಆಹೋ ರಾತ್ರಿ ಪಠಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಬೆಂಗಳೂರಿನ ಪಾದಯಾತ್ರಿಗಳ ಸಂಘದ ನಾಯಕ ಹನುಮಂತಪ್ಪ, ಮರಿಸ್ವಾಮಿ ಮತ್ತು ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

shivaratri

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English