ಗಾಂಜಾ ಸಾಗಾಟ : ಸುಂಟಿಕೊಪ್ಪದ ನಾಲ್ವರ ಬಂಧನ; 1.50ಲಕ್ಷ ರೂ. ಮೌಲ್ಯದ ಮಾಲು ವಶ

10:28 AM, Saturday, February 22nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sunti-koppa

ಮಡಿಕೇರಿ : ಮೈಸೂರಿನ ಮಂಡಿ ಮೊಹಲ್ಲಾದಿಂದ ಗಾಂಜಾವನ್ನು ತಂದು ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಂಟಿಕೊಪ್ಪದ ಕೆ.ಇ.ಬಿ ಬಳಿಯ ನಿವಾಸಿ, ಪೈಂಟಿಂಗ್ ಕೆಲಸ ಮಾಡುವ ಅಮ್ಜದ್ ಶರೀಫ್(31), ಚೆಟ್ಟಳ್ಳಿ ರಸ್ತೆ ನಿವಾಸಿ, ಕೂಲಿ ಕೆಲಸ ಮಾಡುವ ಸಮೀರ್(30), ಅಪ್ಪಾರಂಡ ಬಡಾವಣೆ ನಿವಾಸಿ, ಪೈಟಿಂಗ್ ಕೆಲಸ ಮಾಡುತ್ತಿದ್ದ ಅಫ್ರಿದ್(27), ಕೆ.ಇ.ಬಿ ಬಳಿಯ ನಿವಾಸಿ ಪೈಂಟಿಂಗ್ ಕೆಲಸ ಮಾಡುವ ರವಿ(27) ಎಂಬವರುಗಳೇ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ. ಬಂಧಿತರಿಂದ 1.50ಲಕ್ಷ ರೂ.ಮೌಲ್ಯದ 6 ಕೆ.ಜಿ. ಒಣಗಿದ ಗಾಂಜಾ, ಕೃತ್ಯಕ್ಕೆ ಬಳಸಿದ ಮಾರುತಿ 800 ಕಾರನ್ನು ವಶಕ್ಕೆ ಪಡೆಯಲಾಗಿದೆ.

sunti-koppa

ಕೊಡಗು ಜಿಲ್ಲೆಗೆ ನೆರೆಯ ಮೈಸೂರು ಜಿಲ್ಲೆಯಿಂದ ಮಾದಕ ವಸ್ತು ಗಾಂಜಾ ಸರಬರಾಜಾಗುತ್ತಿರುವ ಬಗ್ಗೆ ಮತ್ತು ಯುವಕರು ಗಾಂಜಾ ವ್ಯಸನಿಗಳಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಣಮಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಅವರು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ನಡೆಸಿ ಜಿಲ್ಲೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಹತ್ತಿಕ್ಕುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಅದರಂತೆ ಪೊಲೀಸರು ಜಿಲ್ಲೆಯಲ್ಲಿ ಗಾಂಜಾ ಸರಬರಾಜು ಮತ್ತು ಮಾರಾಟದ ಬಗ್ಗೆ ನಿಘಾ ವಹಿಸಿದ್ದರು. ಮಾತ್ರವಲ್ಲದೇ, ಕುಶಾಲನಗರ ಪೊಲೀಸರು ಜಿಲ್ಲೆಗೆ ಮೈಸೂರಿನಿಂದ ಗಾಂಜಾವನ್ನು ತರಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ್ದರು.

ಅದರಂತೆ ಫೆ.20ರಂದು ರಾತ್ರಿ ವೇಳೆಯಲ್ಲಿ 4 ಮಂದಿ ಆರೋಪಿಗಳು ಕೆಂಪು ಬಣ್ಣದ ಮಾರುತಿ 800 ಕಾರಿನಲ್ಲಿ ಮೈಸೂರಿನಿಂದ ಸುಂಟಿಕೊಪ್ಪದ ಕಡೆಗೆ ಬರುತ್ತಿದ್ದಾಗ ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 275ರ ಬಸವನಹಳ್ಳಿ ಬಳಿ ಪೊಲೀಸರು ಮತ್ತು ಎಸಿಎಫ್ ನೆಹರು ಅವರನ್ನೊಳಗೊಂಡ ತಂಡ ಕಾರನ್ನು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ಕಾರಿನ ಡಿಕ್ಕಿಯಲ್ಲಿ ಒಂದು ಕಿಟ್ ಬ್ಯಾಗ್‌ನಲ್ಲಿ ಖಾಕಿ ಬಣ್ಣದ ಟೇಪ್ ಸುತ್ತಿದ್ದ 3 ಬಂಡಲ್‌ಗಳು ಇರುವುದು ಕಂಡು ಬಂದಿತ್ತು. ಅವುಗಳನ್ನು ತೆರೆದು ನೋಡಿದಾಗ 6 ಕೆ.ಜಿ.70ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.

sunti-koppa

ಸ್ಥಳದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರಣೆ ನಡೆಸಿದ ಸಂದರ್ಭ, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮೈಸೂರಿನ ಮಂಡಿ ಮಾರ್ಕೆಟ್‌ನಿಂದ ಗಾಂಜಾ ಖರೀದಿಸಿ ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ಗಾಂಜಾ ಸರಬರಾಜನ್ನು ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ. ಹೀಗೆ ತರುವ ಗಾಂಜಾವನ್ನು ಸಣ್ಣ ಪೊಟ್ಟಣವನ್ನಾಗಿಸಿ 300ರಿಂದ 400 ರೂ.ಗಳಿಗೆ ಮಾರಾಟ ಮಾಡುತ್ತಿದ್ದುದಾಗಿಯೂ ಆರೋಪಿಗಳು ಹೇಳಿದ್ದಾರೆ. ಇದರಿಂದ ಬಂದ ಹಣದಿಂದ ಕೆಂಪು ಬಣ್ಣದ ಮಾರುತಿ 800 ಕಾರನ್ನು ಖರೀದಿ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್, ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವೆಂಕಟರಮಣ, ಎಎಸ್‌ಐ ಗೋಪಾಲ್, ಸಿಬ್ಬಂದಿಗಳಾದ ಪ್ರಕಾಶ್, ದಯಾನಂದ, ಸಂದೇಶ್, ಸಂಪತ್, ಲೋಕೇಶ್, ಅಜಿತ್, ರವೀಂದ್ರ, ನಾಗರಾಜ್, ವಿವೇಕ್, ಸಿಡಿಆರ್ ಶೆಲ್‌ನ ರಾಜೇಶ್, ಗಿರೀಶ್, ಚಾಲಕರಾದ ಗಣೇಶ್, ಪ್ರವೀಣ್, ರಾಜು ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English