ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತಂದ ಪೊಲೀಸರು

11:22 AM, Monday, February 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ravi

ಬೆಂಗಳೂರು : ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾನುವಾರ ತಡರಾತ್ರಿ ಕರ್ನಾಟಕ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ, ಮಡಿವಾಳದ ತನಿಖಾ ಕೇಂದ್ರದಲ್ಲಿ ಬಿಗಿ ಭದ್ರತೆಯಲ್ಲಿ ಆತನನ್ನು ಇಡಲಾಗಿದ್ದು, ಇಂದೇ ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ.

2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಈತನನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ಈಗ ಈ ಕಾನೂನು ತೊಡಕು ನಿವಾರಣೆ ಆಗಿದ್ದು, ರವಿಯನ್ನು ತಡರಾತ್ರಿಯೇ ಬೆಂಗಳೂರಿಗೆ ಕರೆತರಲಾಗಿದೆ.

90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕುಳಿತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಸುಮಾರು 15 ವರ್ಷಗಳಿಂದ ರವಿ ಪೂಜಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಅಲ್ಲದೆ, ಈತನಿಗಾಗಿ ಎನ್ಐಎ, ಆರ್ ಎಡಬ್ಲ್ಯೂ ಹಾಗೂ ಕೇಂದ್ರ ತನಿಖಾ ತಂಡಗಳೂ ಹುಡುಕಾಟ ನಡೆಸಿದ್ದರು.

ರವಿ ಪೂಜಾರಿ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 36, ಮಂಗಳೂರಿನಲ್ಲಿ 39 ಸೇರಿ ಹಲವು ಠಾಣೆಗಳಲ್ಲಿ ಕೇಸ್ಗಳು ದಾಖಲಾಗಿವೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ. ಸದ್ಯ, ರಾಜ್ಯದಲ್ಲಿರುವ ಎಲ್ಲ ಕೇಸ್ಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ರಾಜಕಾರಣಿಗಳಿಗೆ ಬೆದರಿಕೆ : ರವಿ ಪೂಜಾರಿ ಹಣಕ್ಕಾಗಿ ಅನೇಕ ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿದ್ದಾರೆ. 2018ರಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ಗೆ ಹಣಕ್ಕಾಗಿ ರವಿ ಪೂಜಾರಿ ಬೇಡಿಕೆ ಇಟ್ಟಿದ್ದ. 15 ಕೋಟಿ ಹಣ‌ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದ. ಮಾಜಿ ಸಚಿವ ಅನಿಲ್ ಲಾಡ್ಗೆ 10 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ.

ಇಂದು ರವಿ ಪೂಜಾರಿಯನ್ನು ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ನಂತರ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ. ರಾಜ್ಯ ಪೊಲೀಸರ‌ ಜೊತೆಗೆ ಎನ್ಐಎ, ಆರ್ ಎಡಬ್ಲ್ಯೂ ಹಾಗೂ ಕೇಂದ್ರ ತನಿಖಾ ತಂಡಗಳಿಂದಲೂ ವಿಚಾರಣೆ ನಡೆಯಲಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English